

| ಸುಭಾಸ ಧೂಪದಹೊಂಡ ಕಾರವಾರ
ಸ್ಪರ್ಧಿಸಿದಾಗಿನಿಂದ ಸೋಲೇ ಕಾಣದೆ ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿರುವ ಹಾಲಿ ವಿಧಾನಸಭಾಧ್ಯಕ್ಷ ಹಾಗೂ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಎದುರಿಸಲು ಕಾಂಗ್ರೆಸ್ನಲ್ಲಿ ಸಮರ್ಥ ಅಭ್ಯರ್ಥಿ ಯಾರು ಎಂಬ ಚರ್ಚೆ ಕ್ಷೇತ್ರದಲ್ಲಿ ನಡೆದಿದೆ. ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರವನ್ನು ಕಿತ್ತುಕೊಳ್ಳಬೇಕು ಎಂದು ಎದುರಾಳಿ ಪಕ್ಷಗಳು ತಂತ್ರ ಹುಡುಕುತ್ತಿವೆ. ಈ ನಡುವೆ ಕಾಗೇರಿಗೆ ಈ ಬಾರಿ ಟಿಕೆಟ್ ತಪ್ಪಿಸುವುದು ಹೇಗೆ ಎಂಬ ಪ್ರಯತ್ನಗಳೂ ಪಕ್ಷದೊಳಗೇ ಪ್ರಾರಂಭವಾಗಿವೆ. ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರದ ಸದ್ಯದ ಕಣ ಚಿತ್ರಣ.
ಹವ್ಯಕ ಬ್ರಾಹ್ಮಣ ಹಾಗೂ ನಾಮಧಾರಿಗಳು ಇಲ್ಲಿನ ನಿರ್ಣಾಯಕ ಮತದಾರರು. ಸ್ವಜಾತಿಯ ಹವ್ಯಕರು ಕಾಗೇರಿಗೆ ಅಭಯ ಹಸ್ತರಾಗಿದ್ದಾರೆ. ಜತೆಗೆ ಬಿಜೆಪಿ ಅಭಿಮಾನಿ ನಾಮಧಾರಿಗಳೂ ಸಾಕಷ್ಟಿರುವುದು ನಿರಂತರ ಗೆಲುವಿಗೆ ಸಹಕಾರಿಯಾಗಿದೆ. ಕೀಳು ಮಟ್ಟದ ರಾಜಕೀಯ ಕೆಸರೆರಚಾಟ, ಹಣದ ಹೊಳೆ ಇಲ್ಲದೇ ಅತ್ಯಂತ ಶಾಂತ, ಸರಳವಾಗಿ ಚುನಾವಣೆ ನಡೆಯುವ ಅಪರೂಪದ ಕ್ಷೇತ್ರ ಎಂಬ ವಿಶೇಷಣ ಶಿರಸಿಗಿದೆ.
6 ಬಾರಿ ನಿರಂತರ ಗೆಲುವು: ವಿಶ್ವೇಶ್ವರ ಹೆಗಡೆ ಕಾಗೇರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದ ಬೆಳೆದು ಬಂದವರು. ಸತತ 6 ಬಾರಿ ವಿಧಾನಸಭೆ ಪ್ರತಿನಿಧಿಸಿದ್ದಾರೆ. ಮೊದಲು ಶಿರಸಿ ತಾಲೂಕಿನ ಕೆಲ ಭಾಗ ಹಾಗೂ ಕರಾವಳಿಯ ಅಂಕೋಲಾ ತಾಲೂಕನ್ನೊಳಗೊಂಡಿದ್ದ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ 1994, 1999, ಹಾಗೂ 2004ರಲ್ಲಿ ಬಿಜೆಪಿಯಿಂದ ಗೆದ್ದು ಬಂದಿದ್ದರು. 2008ರ ಕ್ಷೇತ್ರ ಪುನರ್ ವಿಂಗಡನೆಯ ನಂತರ ನಂತರ ಶಿರಸಿ, ಸಿದ್ದಾಪುರ ತಾಲೂಕನ್ನೊಳಗೊಂಡ ಕ್ಷೇತ್ರದಿಂದ ನಿರಂತರ ಮೂರು ಬಾರಿ ಆಯ್ಕೆಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಕಡಿಮೆಯಾಗಿತ್ತು. ಆದರೆ, 2018ರಲ್ಲಿ ಚೇತರಿಕೆ ಕಂಡಿದೆ. ಯಾವುದೇ ವಿವಾದಗಳಿಗೆ ಸಿಲುಕದೆ ಕ್ಲೀನ್ ಇಮೇಜ್ ಉಳಿಸಿಕೊಂಡಿರುವುದು, ಕ್ಷೇತ್ರದ ಸಾಮಾನ್ಯನ ಮದುವೆ, ಮುಂಜಿ ಸಮಾರಂಭಗಳಿಗೂ ತೆರಳುವುದು ಇವರ ವಿಶೇಷ. ಸುದೀರ್ಘ ರಾಜಕೀಯ ಅನುಭವ ಹೊಂದಿದ್ದರೂ ಕ್ಷೇತ್ರದ ಹಲವು ಗಂಭೀರ ಸಮಸ್ಯೆಗಳಿಗೆ ಪರಿಹಾರ ಹುಡುಕಿಲ್ಲ. ಪರ್ಯಾಯ ನಾಯಕರನ್ನು ಬೆಳೆಸಿಲ್ಲ. ಕಾರ್ಯಕರ್ತರ, ಆಪ್ತರ ವೈಯಕ್ತಿಕ ಕಾರ್ಯಗಳಿಗೆ ಸ್ಪಂದಿಸುವುದಿಲ್ಲ ಎಂಬ ಆರೋಪ ಕಾಗೇರಿ ಮೇಲಿದೆ.
ಆರ್ಎಸ್ಎಸ್ ಗಟ್ಟಿ ಇರುವ ಶಿರಸಿಯಲ್ಲಿ ಈ ಹೊಸ ಪ್ರಯೋಗ ನಡೆಯುತ್ತದೆ ಎಂಬುದು ಕಾಗೇರಿ ಬದಲು ಬಿಜೆಪಿ ಟಿಕೆಟ್ ಬಯಸುತ್ತಿರುವವರ ವಾದ. ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಟಿಕೆಟ್ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಕೆ.ಜಿ. ನಾಯ್ಕ ಜಾತಿಯ ಕಾರ್ಡ್ ಉರುಳಿಸಿ ಪ್ರಯತ್ನ ನಡೆಸಿದ್ದಾರೆ. ಕಾಗೇರಿಗೆ ತಪ್ಪಿದರೆ ತಾವ್ಯಾಕೆ ಪ್ರಯತ್ನಿಸಬಾರದು ಎಂದು ಕೆಲ ಯುವ ಮುಖಗಳೂ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ನಲ್ಲಿ ಹಲವರು: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ, ಸಿದ್ದಾಪುರದ ಮುಖಂಡ ವಸಂತ ನಾಯ್ಕ, ಶಿರಸಿಯ ಶ್ರೀಪಾದ ಹೆಗಡೆ ಕಡವೆ ಟಿಕೆಟ್ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿ, ಫೈಟ್ನಲ್ಲಿದ್ದಾರೆ. ಜೆಡಿಎಸ್ನಲ್ಲಿರುವ ಶಶಿಭೂಷಣ ಹೆಗಡೆ ಅವರನ್ನು ಕಾಂಗ್ರೆಸ್ಗೆ ಕರೆತರುವ ಯತ್ನ ನಡೆದಿದೆ ಎಂಬ ಸುದ್ದಿಯೂ ಇದೆ. ಆದರೂ ಕಾಗೇರಿಯನ್ನು ಎದುರಿಸುವ ಸಮರ್ಥ ನಾಯಕ ಕಾಂಗ್ರೆಸ್ನಲ್ಲಿ ಕಾಣುತ್ತಿಲ್ಲ. ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯವೇ ಕಾಂಗ್ರೆಸ್ ಬೆಳವಣಿಗೆಗೆ ಮುಳ್ಳಾಗಿದೆ. ಶಿರಸಿ ಕ್ಷೇತ್ರದವರೇ ಆಗಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ ಪಕ್ಷ ತೊರೆದು ಕೈ ಹಿಡಿದಿದ್ದಾರೆ. ಶಶಿಭೂಷಣ ಹೆಗಡೆ ಜೆಡಿಎಸ್ನಲ್ಲಿದ್ದೂ ಇಲ್ಲದಂತಿದ್ದಾರೆ. ಇದರಿಂದ ಜೆಡಿಎಸ್ ಚುನಾವಣೆಯಲ್ಲಿ ಫೈಟ್ ನೀಡುವ ಸ್ಥಿತಿಯಲ್ಲಿಲ್ಲ.