ರೀಲ್ಸ್ ಹುಡುಗಿ ಜತೆ ಸಂಬಂಧ ಮುಂದುವರಿಸ್ತೀನಿ ಅದೇನ್​ ಮಾಡ್ತಿಯೋ ಮಾಡು... ಗಂಡನ ಮಾತಿಗೆ ಪ್ರಾಣಬಿಟ್ಟ ವೈದ್ಯೆ! Pratyusha Death Case

Pratyusha Death Case
Published on

Pratyusha Death Case : ವೈದ್ಯೆ ಪ್ರತ್ಯುಷಾ ಸಾವು ಪ್ರಕರಣ ತೆಲಂಗಾಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಗಂಡನ ವಿವಾಹೇತರ ಸಂಬಂಧಕ್ಕೆ ಮನನೊಂದು ಪ್ರತ್ಯುಷಾ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಆಘಾತಕಾರಿ ಸಂಗತಿ ಏನೆಂದರೆ, ಇನ್​ಸ್ಟಾಗ್ರಾಮ್​ ರೀಲ್ಸ್ ಹುಡುಗಿಯ ಜೊತೆ ನನ್ನ ಪ್ರೇಮ ಸಂಬಂಧವನ್ನು ಮುಂದುವರಿಸುತ್ತೇನೆ... ಅದೇನು ಮಾಡುತ್ತೀಯೋ ಮಾಡು ಎಂದು ಗಂಡ ಹೇಳಿದ್ದರಿಂದ ಮನನೊಂದು ಪ್ರತ್ಯುಷಾ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಜಿಪೇಟೆ ಎಸಿಪಿ ಪ್ರಶಾಂತ್ ರೆಡ್ಡಿ ಬಹಿರಂಗಪಡಿಸಿದ್ದಾರೆ.

ಭಾನುವಾರ ದಾಖಲಾಗಿರುವ ಡಾ. ಪ್ರತ್ಯುಷಾ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಮಂಗಳವಾರ (ಜುಲೈ 15) ಅವರ ಪತಿ ಡಾ. ಅಲ್ಲಾಡಿ ಸೃಜನ್, ಅತ್ತೆ ಪುಣ್ಯವತಿ ಹಾಗೂ ಮಾವ ಮಧುಸೂಧನ್ ಮತ್ತು ಇನ್​ಸ್ಟಾಗ್ರಾಮ್​ ರೀಲ್ಸ್​ ಹುಡುಗಿ ಶ್ರುತಿ ಎಂಬಾಕೆಯನ್ನು ಬಂಧಿಸಿ ರಿಮಾಂಡ್​ಗೆ ಕಳುಹಿಸಿದ್ದಾರೆ.

ಕಾಜಿಪೇಟೆ ಎಸಿಪಿ ಪ್ರಶಾಂತ್ ರೆಡ್ಡಿ ಪ್ರಕಾರ, ಮತ್ತೇವಾಡದ ಮೂಲದ ಡಾ. ಪ್ರತ್ಯುಷಾ (35) 2017ರಲ್ಲಿ ಮುಲುಗು ಜಿಲ್ಲೆಯ ಮಂಗಪೇಟೆ ಮಂಡಲದ ಕಮಲಾಪುರದ ಡಾ. ಅಲ್ಲಾಡಿ ಸೃಜನ್ ಎಂಬುವರನ್ನು ವಿವಾಹವಾದರು. ಹಸನ್‌ಪರ್ತಿಯ ಕಾಕತೀಯ ವೆಂಟೇಜ್‌ನಲ್ಲಿ ವಿಲ್ಲಾವನ್ನು ಖರೀದಿಸಿ ವಾಸಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಜತೆ ಸೃಜನ್ ಅವರ ಪಾಲಕರಾದ ಪುಣ್ಯವತಿ ಮತ್ತು ಮಧುಸೂಧನ್ ಕೂಡ ಅಲ್ಲಿ ವಾಸಿಸುತ್ತಿದ್ದಾರೆ.

ಒಂದು ವರ್ಷದ ಹಿಂದೆ, ಡಾ. ಸೃಜನ್​ಗೆ ಬುಟ್ಟಬೊಮ್ಮ -17 ಹೆಸರಿನ ಇನ್‌ಸ್ಟಾಗ್ರಾಮ್ ಐಡಿಯಲ್ಲಿ ರೀಲ್‌ಗಳನ್ನು ಮಾಡುವ ಶ್ರುತಿ ಎಂಬಾಕೆ ಪರಿಚಯವಾದಳು. ಇಬ್ಬರ ಪರಿಚಯ ವಿವಾಹೇತರ ಸಂಬಂಧಕ್ಕೆ ತಿರುಗಿತು. ಈ ವಿಚಾರದ ಪ್ರತ್ಯುಷಾಗೆ ತಿಳಿದಾಗ ಇಬ್ಬರ ನಡುವೆ ಜಗಳ ಶುರುವಾಯಿತು. ಈ ಪ್ರಕ್ರಿಯೆಯಲ್ಲಿ, ಸೃಜನ್​ ತಮ್ಮ ಪತ್ನಿಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದನು.

ಮತ್ತೊಂದೆಡೆ, ಸೃಜನ್ ಸಹ ಫೋನ್‌ನಲ್ಲಿ ಪ್ರತ್ಯುಷಾಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಭಾನುವಾರವೂ ದಂಪತಿಗಳ ನಡುವೆ ಜಗಳವಾಗಿತ್ತು. ಶ್ರುತಿಯನ್ನು ಬಿಡುವುದಿಲ್ಲ ಎಂದು ಸೃಜನ್ ಹೇಳಿದಾಗ, ಪ್ರತ್ಯುಷಾ ಮಹಡಿಯ ಮೇಲೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ, ಸೃಜನ್ ಅವರ ಪೋಷಕರು ಸಹ ತಮ್ಮ ಮಗನಿಗೆ ಜಗಳದಲ್ಲಿ ಬೆಂಬಲ ನೀಡಿದ್ದಾರೆ ಎಂದು ಎಸಿಪಿ ತಿಳಿಸಿದ್ದಾರೆ.

ಮೃತ ಪ್ರತ್ಯುಷಾ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಪಿ ಪ್ರಶಾಂತ್ ರೆಡ್ಡಿ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net