

ಬೆಂಗಳೂರು: ವಚನಜ್ಯೋತಿ ಬಳಗದ ಸಹಯೋಗದಲ್ಲಿ ಪ್ರಪುಣ್ಯಾ ಸಂಗೀತ ಶಾಲೆಯ ವತಿಯಿಂದ ವಿಜಯನಗರದ ಡಾ.ಚಿದಾನಂದಮೂರ್ತಿ ಸಭಾಂಗಣದಲ್ಲಿ ವಚನ ಗಾನ ಯಾನ 6ನೇ ಸರಣಿಯನ್ನು ನಡೆಸಿಕೊಟ್ಟರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಚನ ಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ಕ್ರಿಕೆಟಿಗರು, ಸಿನಿಮಾ ನಟರು ಜೀವನಕ್ಕೆ ಮಾದರಿಯಲ್ಲ, ಅನುಭಾವದ ನೆಲೆಗಟ್ಟಿನಲ್ಲಿ ಬದುಕಿನ ಬಗೆಯನ್ನು ಕಟ್ಟಿಕೊಟ್ಟ ವಚನಕಾರರು ನಮಗೆ ಮಾದರಿಯಾಗಬೇಕು. ವಚನ ಬಿತ್ತನೆ ಇಂದಿನ ಅವಶ್ಯಕತೆಯಾಗಿದ್ದು, ಯುವ ಜನತೆಗೆ ವಚನಗಳನ್ನು ಪರಿಚಯಿಸಿ, ಅವುಗಳ ಸಾರಸತ್ವವನ್ನು ಮನದಲ್ಲಿ ನೆಡಬೇಕಾಗಿದೆ. ಆ ಕಾರಣಕ್ಕೆ ವಚನ ಜ್ಯೋತಿ ಬಳಗವು ಇಂತಹ ವಚನ ಗಾನ ಯಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಪುಣ್ಯಾ ಸಂಗೀತ ಶಾಲೆಯ ಪಂಡಿತ ಈರಯ್ಯ ಚಿಕ್ಕಮಠ, ಆರು ವರ್ಷಗಳಿಂದ ಬಸವ ಜಯಂತಿ ಅಂಗವಾಗಿ ಹೊಸ ಹೊಸ ವಚನಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದು ಬಸವಣ್ಣನವರ ಹೊರತಾಗಿ ಉಳಿದ ಅಪ್ರಸಿದ್ದ ವಚನಕಾರರ ವಚನಗಳನ್ನು ಕಲಿಸಲಾಗಿದೆ ಎಂದರು.
ಸಮಾರಂಭದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಚನಗಳನ್ನು ಹಾಡಿದರು. ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್ ರಾಚಯ್ಯ, ಅನಂತರಾಮು, ಕೃಷ್ಣಪ್ಪ, ಸಿದ್ದೇಶ್ವರ್, ಕೆಂಪರಾಜು, ಕೇಶವಮೂರ್ತಿ,ಭಾಗ್ಯ ಮತ್ತಿತರರಿದ್ದರು.