ಗೋವು ಆರ್ಥಿಕ ಮೂಲವಾಗುವವರೆಗೆ ರಕ್ಷಣೆ ಕಷ್ಟಸಾಧ್ಯ; ಬಿ.ಎಲ್.ಸಂತೋಷ ಅಭಿಮತ

goloka
Published on

ಬೆಂಗಳೂರು: ಗೋಸಂರಕ್ಷಣೆ ಬಗ್ಗೆ ಏನೇ ಮಾಡಿದರೂ ಸಂಪೂರ್ಣ ಯಶಸ್ವಿಯಾಗಲು ಸಾಧ್ಯವಿಲ್ಲ ಗೋವುಗಳನ್ನು ಆರ್ಥಿಕ ಮೂಲವನ್ನಾಗಿ ಮಾರ್ಪಡಿಸಿದರೆ ಗೋಸಂತತಿ ಉಳಿಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದ್ದಾರೆ. ಮಿಥಿಕ್ ಸೊಸೈಟಿಯಲ್ಲಿ ಗೋಲೋಕ ಆಯೋಜಿಸಿದ್ದ ಗೋಸೇವಕ ಕೆ.ಎನ್.ಶೈಲೇಶ್ ಹೊಳ್ಳ ರಚಿಸಿರುವ ಕಾಮಧೇನು ಸರಣಿಯ 5 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಗೋವುಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗ. ಆದರೆ ಅವುಗಳ ರಕ್ಷಣೆಗೆ ಏನೆಲ್ಲಾ ಕ್ರಮ, ಕಾನೂನು, ಹೋರಾಟ, ಜಾಗೃತಿ ಮಾಡಿದರೂ ಪೂರ್ಣಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಗೋವುಗಳನ್ನು ಆರ್ಥಿಕ ಮೂಲವಾಗಿಸಿ ಗೋಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಸುವುದರಿಂದ ರೈತ ತನ್ನ ಗೋವುಗಳನ್ನು ಕಸಾಯಿಖಾನೆಗೆ ಮಾರುವುದಿಲ್ಲ ಅದರಿಂದ ಗೋಸಂರಕ್ಷಣೆಯಾಗುತ್ತದೆ. ಗೋವುಗಳ ಹತ್ಯೆಗೆ ಪ್ರಮುಖ ಕಾರಣ ಅವು ಹಿಂದುಗಳ ನಂಬಿಕೆ ಮತ್ತು ಭಾರತೀಯರ ಪವಿತ್ರ ಜೀವಿ ಎಂಬುದೇ ಪ್ರಮುಖವಾಗಿದೆ. ಗೋಮಾಂಸ ರುಚಿ, ಕಡಿಮೆ ಬೆಲೆ ಎಂದು ಹೇಳುತ್ತಾರೆ. ಆದರೆ ಅದಕ್ಕಿಂತ ಹಿಂದುಗಳು ಅವುಗಳನ್ನು ಪೂಜಿಸುತ್ತಾರೆ ಎಂಬ ಕಾರಣಕ್ಕೆ ಅವುಗಳ ವಧೆಯಾಗುತ್ತಿದೆ. ಗೋಹತ್ಯೆಯ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಯನ್ನು ಕೆಡಿಸುವುದೇ ಪ್ರಮುಖ ಉದ್ದೇಶವಾಗಿದೆ ಎಂದರು. ಪ್ರವಾಹದ ವಿರುದ್ಧ ಈಜುವುದಕ್ಕೆ ಜೀವಂತ ಮೀನಿಗೆ ಮಾತ್ರ ಸಾಧ್ಯ. ಜಾಗೃತವಿಲ್ಲದ ಸಮಾಜದಲ್ಲಿ ಗೋಸಂರಕ್ಷಣೆ ಮಾಡುವ ಕಾರ್ಯ ಬಹಳ ತ್ರಾಸದಾಯಕ. ಅಂತಹ ಕೆಲಸ ಮಾಡುತ್ತಿರುವ ಕೆ.ಎನ್.ಶೈಲೇಶ್ ಕಾರ್ಯ ಸ್ತುತ್ಯಾರ್ಹವಾದುದು ಎಂದು ಬಿ.ಎಲ್.ಸಂತೋಷ್ ತಿಳಿಸಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಖ್ಯಾತ ಪಾರಂಪರಿಕ ವೈದ್ಯ ಹನುಮಂತ ಮಳಲಿ ಮಾತನಾಡಿ, ನಮ್ಮ ಪೂರ್ವಿಕರು ಪಾಲಿಸಿದ ಆಹಾರ ಮತ್ತು ಜೀವನಶೈಲಿಯನ್ನು ಪಾಲಿಸುವುದರಿಂದ ಎಲ್ಲ ಬಗೆಯ ರೋಗಗಳನ್ನು ತಡೆಗಟ್ಟಬಹುದು. ಮನೆಗೊಂದು, ವ್ಯಕ್ತಿಗೊಂದರಂತೆ ದೇಸಿ ಹಸುಗಳನ್ನು ಸಾಕಿದರೆ ಯಾವುದೇ ರೋಗಗಳು ಬರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಗೋಶಾಲೆ ಅಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ, ಚಿಂತಕಿ ಡಾ.ಎಸ್.ಆರ್.ಲೀಲಾ, ಲೇಖಕ ಕೆ.ಎನ್.ಶೈಲೇಶ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

ಆಪರೇಷನ್ ಸ್ಥಗಿತ ಮಾಡಿದ್ದು ಯಾಕೆ ?

ಯುದ್ಧದ ಬಗ್ಗೆ ದೂರದಲ್ಲಿ ನಿಂತು ಕೇಳುವುದು, ನೋಡುವುದು ಬಹಳ ಸುಲಭ. ಆದರೆ ರಣಭೂಮಿಯಲ್ಲಿ ಹೋರಾಡುವವರಿಗೆ ಅದರ ತೀವ್ರತೆ ಅರ್ಥವಾಗುತ್ತದೆ. ಆಪರೇಷನ್ ಸಿಂಧೂರ ನಿಲ್ಲಿಸಿದ್ದನ್ನು ಹಲವು ದೇಶಭಕ್ತರು ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸಿದ್ದರು. ಒಂದು ವೇಳೆ ಯುದ್ಧ ಮುಂದುವರೆದು ನಾಲ್ಕೈದು ಯೋಧರ ಶವಗಳು ರಾಷ್ಟ್ರಧ್ವಜವನ್ನು ಹೊದಿಸಿಕೊಂಡು ಅವರ ಗ್ರಾಮಗಳಿಗೆ ಬಂದಿದ್ದರೆ; ಪೆಟ್ರೋಲ್, ಡಿಸೇಲ್ ಮತ್ತಿತರ ವಸ್ತುಗಳ ಬೆಲೆ ಏರಿಕೆಯಾಗಿದ್ದರೆ ಇದೇ ಜನರು ಯುದ್ಧ ಯಾಕೆ ಬೇಕಿತ್ತು ಎಂದು ಪ್ರಶ್ನಿಸುತ್ತಿದ್ದರು ಎಂದು ಬಿ.ಎಲ್.ಸಂತೋಷ್ ಆಪರೇಷನ್ ಸಿಂಧೂರ ಸ್ಥಗಿತಗೊಳಿಸಿದ್ದನ್ನು ಸಮರ್ಥಿಸಿಕೊಂಡರು.

"ಗೋಶಾಲೆ ಎಂಬುದು ವೃದ್ಧಾಶ್ರಮದವಾಗಬಾರದು. ಗೋವುಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಅದಕ್ಕಾಗಿ ದೇಸಿ ಗೋವುಗಳನ್ನು ಪ್ರತಿಯೊಬ್ಬರೂ ಪಾಲನೆ ಪೋಷಣೆ ಮಾಡಬೇಕು. ಇತರೆ ಎಲ್ಲ ಜೀವಿಗಳಂತೆ ಗೋವುಗಳಿಗೂ ಕೂಡಾ ಸಹಜ ಸಾವು ಬರಬೇಕೆ ವಿನಃ ಹತ್ಯೆಯಾಗುವುದನ್ನು ತಡೆಗಟ್ಟಲು ಎಲ್ಲರೂ ಶ್ರಮಿಸಬೇಕು." -ಕೆ.ಎನ್. ಶೈಲೇಶ್ ಹೊಳ್ಳ, ಗೋಲೋಕದ ಮುಖ್ಯಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net