

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದು, ದೇಶ ಕಂಡ ಅಪ್ರತಿಮ ನಾಯಕನಿಗೆ ಜನರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಎರಡು ಬಾರಿ ಪ್ರಧಾನಿಯಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ ಖ್ಯಾತಿ ಹೊಂದಿರುವ ಮನಮೋಹನ್ ಸಿಂಗ್ ಅವರ ನಿಧನಕ್ಕೆ ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿಯುತ್ತಿರುವ ನಡುವೆಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (Pranab Mukherjee) ಅವರ ಪುತ್ರಿ ಶರ್ಮಿಷ್ಠಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ನಂತರ ಕಾಂಗ್ರೆಸ್ ಕಾರ್ಯಾಕಾರಿ ಸಮಿತಿ ಸಭೆ ನಡೆಸಿ ಸ್ಮಾರಕ ನಿರ್ಮಾಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ಒತ್ತಾಯಿಸಿತ್ತು. ಸರ್ಕಾರ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸ್ಮಾರಕ ನಿರ್ಮಾಣಕ್ಕೆ ಜಾಗ ಹಾಗೂ ಟ್ರಸ್ಟ್ ಸ್ಥಾಪಿಸುವುದಾಗಿ ತಿಳಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನ ತಂದೆ (Pranab Mukherjee) ನಿಧನರಾದಾಗ ಕಾಂಗ್ರೆಸ್ ಪಕ್ಷವು ಕಾರ್ಯಕಾರಿ ಸಮಿತಿ ಹಾಗೂ ಸಂತಾಪ ಸೂಚಕ ಸಭೆಯನ್ನು ಕರೆಯಲಿಲ್ಲ. ಈ ಬಗ್ಗೆ ಕೇಳಿದಾಗ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ರಾಷ್ಟ್ರಪತಿಯಾಗಿದ್ದವರಿಗೆ ನಾವು ಸಭೆ ನಡೆಸುವುದಿಲ್ಲ ಎಂದು ಹೇಳಿದರು. ನನ್ನ ತಂದೆಯವರು ಕಾಂಗ್ರೆಸಸ್ಸಿನಲ್ಲಿದ್ದಾಗ ಕೆ.ಆರ್. ನಾರಾಯಣನಗ್ ಅವರು ನಿಧನರಾಗಿದ್ದರು. ಸಂತಾಪ ಸಭೆಯನ್ನು ಖುದ್ದು ನನ್ನ ತಂದೆಯವರೇ ಆಯೋಜನೆ ಮಾಡಿದ್ದರು. ಈ ವಿಚಾರವನ್ನು ನಾನು ನ್ನ ತಂದೆಯಿಂದಲೇ ತಿಳಿದುಕೊಂಡೆ.
ಇದಲ್ಲದೆ ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಧಾರದ ವಿಚಾರವನ್ನು ಸ್ವಾಗತಿಸಿರುವ ಶರ್ಮಿಷ್ಠಾ ಅವರಿಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನನ್ನ ತಂದೆಯವರು ರಾಷ್ಟ್ರಪತಿಯಾಗಿದ್ದಾಗ ಅವರಿಗೆ ಭಾರತ ರತ್ನ ನೀಡಲು ಬಯಸಿದ್ದರು. ಆದರೆ, ಅದು ಆಗಲಿಲ್ಲ. ಈಗ ಅದರ ಬಗ್ಗೆ ಮಾತನಾಡುವುದು ಬೇಡ ಎಂದು ಮಾಜಿ ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಟ್ವೀಟ್ ಮಾಡಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ಅಂತ್ಯಸಂಸ್ಕಾರವು ಸೇನಾ ಗೌರವಗಳೊಂದಿಗೆ ನವದೆಹಲಿಯ ನಿಗಮಬೋಧ ಘಾಟ್‌ನಲ್ಲಿ ನಡೆಯಲಿದ್ದು, ಈಗಾಗಲೇ ತಯಾರಿ ಆರಂಭಿಸಲಾಗಿದೆ. ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರ ತೆರಳಲಿರುವ ರಸ್ತೆಗಳಲ್ಲಿ ಪೊಲೀಸರು ಈಗಾಗಲೇ ಬಿಗಿ ಬಂದೋಬಸ್ತ್ ಮಾಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ.