ಬೆಟ್ಟಿಂಗ್ ಬಿಸಿ: ಪ್ರಕರಣ ಕುರಿತು ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ | Prakash Raj

ವಿಜಯವಾಣಿ (29)
Published on

Prakash Raj: ಜಾಲತಾಣದಲ್ಲಿ ಬೆಟ್ಟಿಂಗ್​ ಆ್ಯಪ್​ಗಳನ್ನು ಪ್ರಚಾರ ಮಾಡುತ್ತಿರುವವರ ವಿರುದ್ಧ ಹೈದರಾಬಾದ್​ ಪೊಲೀಸರು ಸಮರ ಸಾರಿದ್ದಾರೆ. ಟಾಲಿವುಡ್​ ನಟ-ನಟಿಯರು, ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳು ಹಾಗೂ ಕಿರುತೆರೆ ಕಲಾವಿದರ ವಿರುದ್ಧ ಸರಣಿ ಪ್ರಕರಣಗಳು ದಾಖಲಾಗುತ್ತಿವೆ.

ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದಡಿ ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕಾಶ್​ ಜತೆಗೆ ರಾಣಾ, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ ಮತ್ತು ಪ್ರಣೀತಾ ಅವರಂತಹ ಅನೇಕರ ವಿರುದ್ಧ ಪ್ರಕರಣ ದಾಖಲಾಗಿವೆ. ತನ್ನ ವಿರುದ್ಧ ದಾಖಲಾದ ಬೆಟ್ಟಿಂಗ್ ಆ್ಯಪ್​ ಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೆಗೂ ಪ್ರಕಾಶ್ ರಾಜ್ ವೀಡಿಯೊ ಮೂಲಕ ಪ್ರತಿಕ್ರಿಯಿಸಿದ್ದಾರೆ.

"ಬೆಟ್ಟಿಂಗ್ ಆ್ಯಪ್‌ಗಳು ಮತ್ತು ಹಿಂದೆ ಮಾಡಿದ್ದ ಜಾಹೀರಾತಿನ ಬಗ್ಗೆ ನನಗೆ ಈಗಷ್ಟೇ ತಿಳಿದು ಬಂದಿದೆ. ಸಾಮಾನ್ಯವಾಗಿ ಎಲ್ಲರನ್ನೂ ಪ್ರಶ್ನಿಸುವ ನಾನು, ಈಗ ಉತ್ತರಿಸಬೇಕಾಗುತ್ತದೆ. ನನಗೆ ಪೊಲೀಸ್ ಇಲಾಖೆಯಿಂದ ಇಲ್ಲಿಯವರೆಗೂ ಯಾವುದೇ ನೋಟಿಸ್​ ಬಂದಿಲ್ಲ. ಬಂದರೆ ಖಂಡಿತ ಪ್ರತಿಕ್ರಿಯೆ ನೀಡುತ್ತೇನೆ. 2016ರಲ್ಲಿ ಆ ಜಾಹೀರಾತಿನವರು ನನ್ನನ್ನು ಕೇಳಿದ್ದರು. ಅದು ನಿಜ. ನಾನು ಮಾಡಿದ್ದೆ. ಆದಾಗ್ಯೂ, ಅದು ಸರಿಯಲ್ಲ ಎಂದು ನನಗೆ ಅನಿಸಿತು" ಎಂದರು.

"ಮುಂದಿನ ವರ್ಷ ಈ ಜಾಹೀರಾತಿಗಾಗಿ ತಮ್ಮ ಒಪ್ಪಂದವನ್ನು ವಿಸ್ತರಿಸಲು ಅವರು ನನ್ನನ್ನು ಕೇಳಿಕೊಂಡರು. ಆದಾಗ್ಯೂ, ಅವರು ಜಾಹೀರಾತನ್ನು ತಿಳಿಯದೆ ಮಾಡಿದ್ದಾರೆ ಮತ್ತು ಒಪ್ಪಂದ ಮುಗಿದ ಕಾರಣ, ಅದನ್ನು ಇನ್ನು ಮುಂದೆ ಪ್ರಸಾರ ಮಾಡಬೇಡಿ ಮತ್ತು ಮತ್ತೆ ಅಂತಹ ವಿಷಯಗಳಲ್ಲಿ ನಟಿಸುವುದಿಲ್ಲ ಎಂದು ನಾನು ಅವರಿಗೆ ಹೇಳಿದ್ದೆ. ಅದಾದ 9 ವರ್ಷಗಳ ನಂತರ ಇಂತಹ ಜಾಹಿರಾತುಗಳಲ್ಲಿ ನಾನು ನಟಿಸಲಿಲ್ಲ. ಬಹುಶಃ 2021ರಲ್ಲಿ ಮತ್ತೊಂದು ಕಂಪನಿಯನ್ನು ಖರೀದಿಸಿದ ಇವರು, ಸಾಮಾಜಿಕ ಮಾಧ್ಯಮದಲ್ಲಿ ತನ್ನ ಹಳೆಯ ಜಾಹೀರಾತನ್ನು ಬಳಸಿಕೊಂಡಿದೆ ಅನಿಸುತ್ತೆ. ಅದಕ್ಕಾಗಿ ನಾನು ಅವರಿಗೆ ಕಾನೂನು ನೋಟಿಸ್‌ಗಳನ್ನು ಕಳುಹಿಸಿ, ಇದರಲ್ಲಿ ನಾನಿಲ್ಲ. ಅದರ ಅವಧಿ ಮುಗಿದು ಹೋಗಿದೆ ಎಂದು ಎಚ್ಚರಿಕೆ ನೀಡಿದ್ದೆ" ಎಂದಿದ್ದಾರೆ.

"ಅದಾದ ಬಳಿಕ ಅವರು ಅದನ್ನು ನಿಲ್ಲಿಸಿದರು. ಅದು ಈಗ ಮತ್ತೆ ಸೋರಿಕೆಯಾಗಿದೆ. ಎಲ್ಲರಿಗೂ ಇದು ಅರ್ಥವಾಗುತ್ತೆ ಎಂದು ನಾನು ಭಾವಿಸುತ್ತೀನಿ. 8 ವರ್ಷಗಳ ಹಿಂದೆ ನನ್ನಿಂದ ಒಂದು ತಪ್ಪಾಗಿದೆ, ಕ್ಷಮಿಸಿ. ಇಂತಹ ಗೇಮಿಂಗ್ ಅಪ್ಲಿಕೇಶನ್‌ಗಳಿಂದ ಯುವಕರು ದೂರವಿರಿ, ಇದರ ಬಗ್ಗೆ ಎಚ್ಚರವಿರಲಿ" ಎಂದು ಸಲಹೆ ನೀಡಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net