ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ನಾಡ ಗ್ರಾಪಂನಿಂದ ಬೇರ್ಪಟ್ಟಿದ್ದ ಸೇನಾಪುರ ಗ್ರಾಮ ಕುಂದಾಪುರ ತಾಲೂಕಿನ ಹೊಸಾಡು ಗ್ರಾಪಂಗೆ ಸೇರ್ಪಡೆಗೊಂಡು ಒಂದು ವರ್ಷ ಕಳೆದರೂ ಚುನಾಯಿತ ಜನಪ್ರತಿನಿಧಿಗಳ ಆಯ್ಕೆಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ.

ಕುಂದಾಪುರ ತಾಲೂಕಿನ ಹೊಸಾಡು ಗ್ರಾಪಂ ಅತಿ ಚಿಕ್ಕ ಗ್ರಾಪಂ ಆಗಿದ್ದು, ಸುಮಾರು 862 ಕುಟುಂಬಗಳ 4510 ಜನಸಂಖ್ಯೆ ಹೊಂದಿದ ಎರಡು ವಾರ್ಡ್‌ಗಳುಳ್ಳ ಗ್ರಾಪಂ ಇದಾಗಿದೆ. ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೂ ಪಾತ್ರವಾಗಿದೆ. ಹೊಸಾಡು ಗ್ರಾಪಂಗೆ ಸೇನಾಪುರ ಗ್ರಾಮ ಸೇರ್ಪಡೆಗೊಂಡಿದ್ದು, 900 ಮನೆಗಳುಳ್ಳ 2 ಸಾವಿರ ಜನಸಂಖ್ಯೆ ಹೊಂದಿದೆ.
ಸ್ಥಳೀಯರ ವಿರೋಧ
ಸೇನಾಪುರ ಗ್ರಾಮವನ್ನು ಹೊಸಾಡು ಗ್ರಾಪಂ ವ್ಯಾಪ್ತಿಗೆ ಸೇರಿಸಿರುವುದರನ್ನು ವಿರೋಧಿಸಿ ಸ್ಥಳೀಯರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರಿಂದ ನಾಲ್ಕು ವರ್ಷಗಳ ಹಿಂದೆ ನಡೆಯಬೇಕಿದ್ದ ಗ್ರಾಪಂ ಚುನಾವಣೆ ನಡೆದಿರಲಿಲ್ಲ. ಚುನಾಯಿತ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಹಾಗೂ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಸರ್ಕಾರ ಹೊಸಾಡು ಗ್ರಾಪಂಗೆ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ವಿವಾದ ಕೊನೆಗೂ ಬಗೆಹರಿದು ವರ್ಷ ಕಳೆದರೂ ಗ್ರಾಪಂ ಸದಸ್ಯರ ಆಯ್ಕೆಗೆ ಇನ್ನೂ ಮುಹೂರ್ತ ಫಿಕ್ಸ್ ಆಗಿಲ್ಲ.
ಕ್ರಮ ಅಗತ್ಯ
ನಾಲ್ಕು ವರ್ಷಗಳಿಂದ ಆಡಳಿತಾಧಿಕಾರಿ ನೇತೃತ್ವದಲ್ಲಿ ಗ್ರಾಪಂ ಆಡಳಿತ ವ್ಯವಸ್ಥೆ ನಡೆಯುತ್ತಿದ್ದು, ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಆಡಳಿತ ಯಂತ್ರ ಸೊರಗಿ ಹೋಗಿದೆ. ಗ್ರಾಮದ ಅಭಿವೃದ್ಧಿ ಹಾಗೂ ಆಡಳಿತ ವ್ಯವಸ್ಥೆ ಚುರುಕುಗೊಳ್ಳಬೇಕಾದರೆ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಮಂಡಳಿ ಅತ್ಯವಶ್ಯ. ಚುನಾವಣೆ ನಡೆಸಲು ಎದುರಾಗಿದ್ದ ವಿವಾದ ಬಗೆಹರಿದಿದ್ದು ಇನ್ನೇನಿದ್ದರೂ ಚುನಾವಣೆ ನಡೆಸಿ ಚುನಾಯಿತ ಸದಸ್ಯರಿಗೆ ಗ್ರಾಮದ ಆಡಳಿತ ಚುಕ್ಕಾಣಿ ನೀಡಲು ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕಿದೆ.
ಏನಿದು ವಿವಾದ
ಕುಂದಾಪುರ ತಾಲೂಕಿಗೆ ಸೇರಿರುವ ಸೇನಾಪುರ ಗ್ರಾಮವನ್ನು ನಾಡ ಗ್ರಾಪಂನಿಂದ ಬೇರ್ಪಡಿಸಿ ಹೊಸಾಡು ಗ್ರಾಪಂ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ 4ರ ಉಪಪ್ರಕರಣ 2(ಎ) ಅಡಿ ಉಡುಪಿ ಜಿಲ್ಲಾಧಿಕಾರಿಯವರು 2020ರ ಸೆಪ್ಟೆಂಬರ್ 23ರಂದು ಅಧಿಸೂಚನೆ ಹೊರಡಿಸಿದ್ದರು. ಜಿಲ್ಲಾಧಿಕಾರಿಗಳ ಈ ಕ್ರಮ ಖಂಡಿಸಿ ಪ್ರತಿಭಟನೆ, ಹೋರಾಟಗಳು ನಡೆದಿದ್ದು, ಯಾವುದೇ ಕಾರಣಕ್ಕೂ ಸೇನಾಪುರ ಗ್ರಾಮ ಹೊಸಾಡು ಗ್ರಾಪಂ ವ್ಯಾಪ್ತಿಗೆ ಸೇರ್ಪಡೆಗೊಳಿಸಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಸೇನಾಪುರ ಗ್ರಾಮ ನಾಡ ಗ್ರಾಪಂಗೆ ಹತ್ತಿರದಲ್ಲಿದೆ. ಸೇನಾಪುರವನ್ನು ದೂರದ ಹೊಸಾಡು ಗ್ರಾಪಂಗೆ ಸೇರ್ಪಡೆ ಮಾಡಿದರೆ ಜನರ ಕಷ್ಟ ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ ಸೇನಾಪುರ ಗ್ರಾಮವನ್ನು ನಾಡ ಗ್ರಾಪಂನಲ್ಲಿ ಉಳಿಸಿಕೊಳ್ಳಬೇಕೆಂದು ಹೊಸಾಡು ಗ್ರಾಪಂಗೆ ಸೇರ್ಪಡೆಗೊಳಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳು ಹೊರಡಿಸಿರುವ ಪ್ರಶ್ನಿತ ಅಧಿಸೂಚನೆಯಲ್ಲಿ ಯಾವುದೇ ಲೋಪ ಕಂಡುಬಾರದಿರುವ ಹಿನ್ನೆಲೆಯಲ್ಲಿ ಆಕ್ಷೇಪಣಾ ಅರ್ಜಿ ತಿರಸ್ಕರಿಸಿ ಹೊಸಾಡು ಗ್ರಾಪಂಗೆ ಚುನಾವಣೆ ನಡೆಸಲು ನಿಯಮಾನುಸಾರ ಅಗತ್ಯ ಕ್ರಮ ವಹಿಸುವಂತೆ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಹೊಸಾಡು ಗ್ರಾಪಂಗೆ ಸೇನಾಪುರ ಗ್ರಾಮವನ್ನು ಸೇರ್ಪಡೆಗೊಳಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಚುನಾಯಿತ ಸದಸ್ಯರು ಇಲ್ಲದಿರುವುದರಿಂದ ಆಡಳಿತಾಧಿಕಾರಿ ನೇಮಕಗೊಂಡಿದ್ದಾರೆ. ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ. ಮುಂದಿನ ಹಂತದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
-ಶೋಭಾಲಕ್ಷ್ಮೀ ತಹಸೀಲ್ದಾರ್ ಕುಂದಾಪುರ