
ಕೊಕ್ಕರ್ಣೆ: ಮಕ್ಕಳಿಗೆ ದೇವರ ಹೆಸರನ್ನು ಇಡುವ ಸಂಪ್ರದಾಯ ಸನಾತನ ಧರ್ಮದಲ್ಲಿ ಮಾಯವಾಗಿ ಮುಂದಿನ ದಿನದಲ್ಲಿ ದೇವರ ಹೆಸರೇ ಇಲ್ಲದಂತಾಗುವ ಆತಂಕ ಎದುರಾಗಿದೆ. ಧರ್ಮ ಸಂಸ್ಕೃತಿಯ ಜಾಗೃತಿ ಎಲ್ಲ ಭಾಗದಿಂದ ನಡೆಯಬೇಕು ಎಂದು ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನಹಳ್ಳಿ ಪೀಠಾಧೀಶ ಶ್ರೀ ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ ಹೇಳಿದರು.
ಶಾಖಾ ಮಠ ಕಜ್ಕೆಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶ್ರೀಗಳ 42ನೇ ಚಾತುರ್ಮಾಸ್ಯ ವ್ರತಾಚರಣೆ ಜರುಗಿ ಬುಧವಾರ ಸೀಮೋಲ್ಲಂಘನ ಕಾರ್ಯಕ್ರಮದಲ್ಲಿ ಮಾತನಾಡಿದರು. ಚೇರ್ಕಾಡಿ ಬಳಿಯ ಸೀತಾನದಿ ಮಡಿಸಾಲಿನಲ್ಲಿ ಗಂಗಾಪೂಜೆ ಬಾಗಿನ ಸಮರ್ಪಣೆ ಜರುಗಿತು. ಬಳಿಕ ಚೇರ್ಕಾಡಿ, ಬೆಳ್ಳಂಪಳ್ಳಿ, ಹಾವಂಜೆ, ಕುಕ್ಕೆಹಳ್ಳಿ ಭಾಗದ ವಿಶ್ವಕರ್ಮ ಸಮಾಜ ಭಾಂದವರಿಂದ ತೆರೆದ ವಾಹನದಲ್ಲಿ ಪುರಮೆರವಣಿಗೆಯಲ್ಲಿ ಸಾಗಿ ಬಂದು ಕನ್ನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು.
ಚೇರ್ಕಾಡಿ ಗ್ರಾಪಂ ಅಧ್ಯಕ್ಷ ನಾರಾಯಣ ನಾಯ್ಕ, ಧನಂಜಯ್ ಅಮೀನ್, ಹರೀಶ್ ಶೆಟ್ಟಿ ಚೇರ್ಕಾಡಿ, ಕಮಲಾಕ್ಷ ಹೆಬ್ಬಾರ್, ರಾಧಾ ಕೃಷ್ಣ ಸಾಮಂತ, ಕೃಷ್ಣ ಮಡಿವಾಳ, ಶೇಖರ ಕುಲಾಲ್, ಸುರೇಶ್ ಪೂಜಾರಿ, ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.