ಶೆಫ್ ಆದರು ಅನುಷ್ಕಾ; ನಟಿಯ 41ನೇ ಹುಟ್ಟುಹಬ್ಬಕ್ಕೆ ಪೋಸ್ಟರ್ ಉಡುಗೊರೆ

Anushka
Published on

‘ನಿಶಬ್ದಂ’ ಚಿತ್ರದ ಬಳಿಕ ಕಳೆದ ಎರಡು ವರ್ಷಗಳಿಂದ ನಟಿ ಅನುಷ್ಕಾ ಯಾವ ಚಿತ್ರದಲ್ಲು ಕಾಣಿಸಿಕೊಂಡಿರಲಿಲ್ಲ. 2020ರಲ್ಲಿ ‘ನಿಶಬ್ದಂ’ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಅದಕ್ಕೂ ಮುನ್ನ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸಿದ್ದರೂ, ಅದರಲ್ಲಿ ವಿಶೇಷ ಪಾತ್ರದಲ್ಲಿ ಹಾಗೆ ಬಂದು ಹೀಗೆ ಹೋಗಿದ್ದರಷ್ಟೆ. ಹೀಗಾಗಿ 2018ರಲ್ಲಿ ರಿಲೀಸ್ ಆದ ‘ಭಾಗಮತಿ’ ಅವರು ನಾಯಕಿಯಾಗಿ ಬಿಗ್ ಸ್ಕ್ರೀನ್​ನಲ್ಲಿ ಕಾಣಿಸಿಕೊಂಡಿದ್ದ ಕೊನೆಯ ಚಿತ್ರವಾಗಿತ್ತು. ಈಗ ನಾಲ್ಕು ವರ್ಷಗಳ ಬಳಿಕ ಅನುಷ್ಕಾ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಸೋಮವಾರ 41ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಅವರಿಗೆ ಚಿತ್ರತಂಡ ಹೊಸ ಪೋಸ್ಟರ್ ಉಡುಗೊರೆ ನೀಡಿದೆ. ವಿಶೇಷ ಅಂದರೆ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅನುಷ್ಕಾ ‘ಅನ್ವಿತಾ ರಾವಲಿ ಶೆಟ್ಟಿ’ ಎಂಬ ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ನವೀನ್ ಪೊಲಿಶೆಟ್ಟಿ ನಾಯಕನಾಗಿದ್ದು, ಮಹೇಶ್ ಬಾಬು ಪೊಚಿಗೆಲ್ಲ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸ್ವಲ್ಪ ಆಕ್ಷನ್ ಕೂಡ ಇರಲಿದೆ. ಜತೆಗೆ ಮ್ಯಾಥ್ಯೂ ಥಾಮಸ್ ನಿರ್ದೇಶನದ, ಸುರೇಶ್ ಗೋಪಿ ಮತ್ತು ಬಿಜು ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ‘ಒಟ್ಟಕೊಂಬನ್’ ಎಂಬ ಚಿತ್ರದಲ್ಲೂ ಅನುಷ್ಕಾ ನಟಿಸುತ್ತಿದ್ದಾರೆ. ಈ ಎರಡು ಚಿತ್ರಗಳೂ ಮುಂದಿನ ವರ್ಷ ಬಿಡುಗಡೆಯಾಗಲಿವೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net