1 ಕೋಟಿ ರೂ. ವಂಚನೆ: ಮಾಜಿ ಸಚಿವರ ಮೊಮ್ಮಗಳ ವಿರುದ್ಧ ಪ್ರಕರಣ ದಾಖಲು..!

Karthika
Published on

ಹೈದರಾಬಾದ್​: ಪ್ರಖ್ಯಾತ ತೆಲುಗು ಟಿವಿ ಆ್ಯಂಕರ್​ ಕಾತಿ ಕಾರ್ತಿಕಾ ವಿರುದ್ಧ ವಂಚನೆ ಪ್ರಕರಣವೊಂದು ದಾಖಲಾಗಿದೆ. ಅಂದಹಾಗೆ ಕಾರ್ತಿಕಾ, ತೆಲಂಗಾಣದ ಮಾಜಿ ಸಚಿವ ಮತ್ತು ಪ್ರಸ್ತುತ ಡೆಪ್ಯುಟಿ ಸ್ಪೀಕರ್​ ಆಗಿರುವ ಟಿ. ಪದ್ಮ ರಾವ್ ಅವರ ಮೊಮ್ಮಗಳು​.

ಬಿಲ್ಡರ್​ ಒಬ್ಬರಿಗೆ 1 ಕೋಟಿ ರೂ. ವಂಚನೆ ಮಾಡಿದ ಆರೋಪದಲ್ಲಿ ಕಾರ್ತಿಕಾ ಮತ್ತು ಆಕೆಯ ಸಹಚರರ ವಿರುದ್ಧ ಹೈದರಾಬಾದಿನ ಬಂಜಾರ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಮತ್ತು ಆಕ್ಷೇಪಣಾ ರಹಿತ ಪ್ರಮಾಣಪತ್ರ (NoCs) ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡಿದ್ದಳು ಎಂಬ ಆರೋಪ ಕಾರ್ತಿಕಾ ಮೇಲಿದೆ.

ತೆಲಂಗಾಣದ ಡುಬ್ಬಕ್​ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿಕಾರ್ತಿಕಾ ಕಣಕ್ಕಿಳಿದಿದ್ದು, ಇದರ ಬೆನ್ನಲ್ಲೇ ಆಕೆಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಅಂದಹಾಗೆ ಕಾರ್ತಿಕಾ ಬಿಗ್​ಬಾಸ್​ ಮೂಲಕ ತೆಲಂಗಾಣದಲ್ಲಿ ಪ್ರಖ್ಯಾತಿ ಗಳಿಸಿಕೊಂಡಿದ್ದಾರೆ.

ಟಚ್​ಸ್ಟೋನ್​ ಪ್ರಾಪರ್ಟಿ ಡೆವಲಪರ್ಸ್​ನ ಮ್ಯಾನೇಜಿಂಗ್​ ಡೈರೆಕ್ಟರ್​ ದೊರೆಸ್ವಾಮಿ ಎಂಬುವರು ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ ದೊರೆಸ್ವಾಮಿ ಅವರು ಕಾರ್ತಿಕಾ ಹಾಗೂ ಆಕೆಯ ಸಹಚರರ ಒಡೆತನದ ಕಾರ್ತಿಕಾ ಬಿಆರ್​ಎಂ ಸಂಸ್ಥೆಗೆ ಒಂದು ಕೋಟಿ ರೂ. ಡೆಪಾಸಿಟ್​ ಮಾಡಿದ್ದರಂತೆ0. ಮೇದಕ್​ ಜಿಲ್ಲೆಯ ಅಮೀನ್​ಪುರದಲ್ಲಿರುವ 52 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಿಕೊಡುವುದಾಗಿ ಹೇಳಿ ಹಣವನ್ನು ವಂಚಿಸಿದ್ದಾರೆಂದು ಆರೋಪಿಸಿದ್ದಾರೆ.

52 ಎಕರೆ ಜಾಗದಲ್ಲಿ ಹೌಸಿಂಗ್​ ಪ್ರಾಜೆಕ್ಟ್​ ಮಾಡಲು ದೊರೆಸ್ವಾಮಿ ಯೋಜನೆ ರೂಪಿಸಿದ್ದರಂತೆ. ಯಾವುದೇ ತೊಡಕಾಗದಂತೆ ತೆಲಂಗಾಣ ಸರ್ಕಾರದಿಂದ ಆಕ್ಷೇಪಣಾ ರಹಿತ ಪ್ರಮಾಣಪತ್ರ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾಳೆಂದು ಆರೋಪಿಸಲಾಗಿದೆ. ಹೀಗಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net