ಕೆಆರ್‌ಡಿಎಲ್ ಕಾಮಗಾರಿ ಕಳಪೆ : ಅಧ್ಯಕ್ಷ ಜಯಾನಂದ ಗೌಡ ಆರೋಪ ಬೆಳ್ತಂಗಡಿ ಪಪಂ ಪ್ರಗತಿ ಪರಿಶೀಲನೆ

9
Published on

ಬೆಳ್ತಂಗಡಿ: ಬೆಳ್ತಂಗಡಿ ನಗರದಲ್ಲಿ ಕೆಆರ್‌ಡಿಎಲ್‌ನ 10 ಕೋಟಿ ರೂ.ನ 33 ಕಾಮಗಾರಿಯಲ್ಲಿ ಕೆಇಬಿ-ಚರ್ಚ್ ರಸ್ತೆ ಕಾಮಗಾರಿ ಕಳಪೆಯಾಗಿದೆ. ಹಲವು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಹೇಳಿದರು.

ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಆರ್‌ಡಿಎಲ್ ಮತ್ತು ಕ.ನ.ನೀ.ಸ ಮತ್ತು ಒ.ಚ.ಮಂಡಳಿ ವತಿಯಿಂದ ನಡೆಯುತ್ತಿರುವ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರಿಯ ಸದಸ್ಯ ಜಗದೀಶ್ ಮಾತನಾಡಿ, 2017-18ರ ಸಾಲಿನಲ್ಲಿ ಪಟ್ಟಣ ಪಂಚಾಯಿತಿಗೆ 33 ಕಾಮಗಾರಿ ಮಂಜೂರುಗೊಂಡಿದೆ. 7 ವರ್ಷ ಕಳೆದರೂ ಕಾಮಗಾರಿ ಇನ್ನೂ ಪೂರ್ತಿ ಆಗಿಲ್ಲ. ಮಾಡಿರುವ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಡಿಎಲ್‌ನ ಸಹಾಯಕ ಕಾರ್ಯಪಾಲಕ ಅಭಿಯಂತೆ ಫರಿದಾ ಉತ್ತರಿಸಿ, ಕೆಆರ್‌ಡಿಎಲ್‌ಗೆ 2020ರಲ್ಲಿ 10 ಕೋಟಿ ರೂ.ನ 34 ಕಾಮಗಾರಿಗೆ ಮಂಜೂರಾತಿ ದೊರಕಿದ್ದು, ಇದರಲ್ಲಿ 3 ಕಾಮಗಾರಿ ಮಾತ್ರ ಬಾಕಿಯಾಗಿದೆ ಎಂದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಮಂಜೂರಾದ 10 ಕೋಟಿ ರೂ.ನ 33 ಕಾಮಗಾರಿಯನ್ನು ಪೂರ್ತಿಗೊಳಿಸಬೇಕು. ರಾಜ್ಯದ ಸಚಿವರಿಗೆ, ಮುಖ್ಯಮಂತ್ರಿಗೆ, ಲೋಕಾಯುಕ್ತರಿಗೆ ದೂರು ಕೊಡುತ್ತೇನೆ. ಇದರ ಸಮಗ್ರ ತನಿಖೆಯಾಗಲಿ ಎಂದು ಜಗದೀಶ್ ಹೇಳಿದರು.

ರೆಂಕೆದಗುತ್ತುವಿನಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ಸಂಗ್ರಹಣಾ ಟ್ಯಾಂಕ್‌ಗೆ ಗ್ರೇ ವಾಟರ್ ಮತ್ತು ಮನೆಯ ಶೌಚಗೃಹದ ನೀರು ಸಂಗ್ರಹಣೆಗೆ ಅವಕಾಶ ಇದೆ. ಆದರೆ ಅಲ್ಲಿಯ ನಿವಾಸಿಗಳು ಶೌಚಗುಂಡಿಯ ತ್ಯಾಜ್ಯ ನೀರು ಟ್ಯಾಂಕ್‌ಗೆ ಬಿಡಬಾರದು ಎಂದು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಗ್ರೇವಾಟರ್ ಸಂಪರ್ಕ ನೀಡಲಾಗಿದೆ. ಈಗ ಅಲ್ಲಿ 97 ಮನೆಯ ಸಂಪರ್ಕ ಮಾಡಲಾಗಿದೆ. ಇನ್ನೂ ಮೂರು ಮನೆಯವರ ಒಪ್ಪಿಗೆ ಇಲ್ಲದ ಕಾರಣ ಸಂಪರ್ಕ ಮಾಡಿಲ್ಲ ಎಂದು ಇಂಜಿನಿಯರ್ ರಕ್ಷಿತ್ ಮಾಹಿತಿ ನೀಡಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್‌ಕುಮಾರ್, ಸದಸ್ಯರಾದ ಜಗದೀಶ್ ಡಿ, ತುಳಸಿ, ಮುಖ್ಯಾಧಿಕಾರಿ ರಾಜೇಶ್, ಇಂಜಿನಿಯರ್ ಮಹಾವೀರ ಆರಿಗಾ, ಕೆಆರ್‌ಐಡಿಎಲ್ ಮಂಗಳೂರಿನ ಸಹಾಯಕ ಕಾರ್ಯಪಾಲಕ ಅಭಿಯಂತೆ ಫರಿದಾ, ಮೇಲ್ವಿಚಾರಕ ಗುರುಪ್ರಸಾದ್, ಕ.ನ.ನೀ.ಸ ಮತ್ತು ಒಳ ಚರಂಡಿ ಮಂಡಳಿ ಮಂಗಳೂರಿನ ಕಾರ್ಯಪಾಲಕ ಅಭಿಯಂತ ರಕ್ಷಿತ್ ಭಾಗವಹಿಸಿದ್ದರು.

ಬೆಳ್ತಂಗಡಿಗೆ ರಾಷ್ಟ್ರಪತಿ ಬರುವ ನಿರೀಕ್ಷೆ

ಬೆಳ್ತಂಗಡಿಯ ಕೆಇಬಿ-ಚರ್ಚ್ ರಸ್ತೆಯ ಕಾಮಗಾರಿ ಕಳಪೆಯಾಗಿದೆ. ಬೆಳ್ತಂಗಡಿಯ ಕಾರ್ಯಕ್ರಮವೊಂದಕ್ಕೆ ರಾಷ್ಟ್ರಪತಿ ಬರುವ ನಿರೀಕ್ಷೆಯಿದ್ದು ರಸ್ತೆ ಸರಿಪಡಿಸಬೇಕು. ಯಾರು ಇದರ ಕಾಮಗಾರಿ ಮಾಡಿದ್ದಾರೋ, ಅದೇ ಗುತ್ತಿಗೆದಾರರಿಂದ ಕಾಮಗಾರಿಯನ್ನು ಮಾಡಿಸಲು ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷ ಜಯಾನಂದ ಗೌಡ ಸೂಚನೆ ನೀಡಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಇಂಜಿನಿಯರ್ ಫರಿದಾ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net