ಮಣ್ಣಗುಡ್ಡ ಕೃಷ್ಣಾ ಹೆರಿಟೇಜ್‌ಗೆ ಬೆಂಕಿ

mng-mar12-firre
Published on

ಮಂಗಳೂರು: ಮಣ್ಣಗುಡ್ಡ 8ನೇ ಅಡ್ಡ ರಸ್ತೆಯಲ್ಲಿರುವ ಕೃಷ್ಣಾ ಹೆರಿಟೇಜ್‌ನ ಹಿಂಬದಿ ಪಾರ್ಶ್ವ ಬುಧವಾರ ಬೆಂಕಿಗಾಹುತಿಯಾಗಿದೆ.

ಬೆಳಗ್ಗೆ 11 ಗಂಟೆ ವೇಳೆಗೆ ಎ.ಸಿ. ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಹಂಚಿನ ಮಾಡಿಗೆ ಪಸರಿಸಿದೆ. ಮಾಡು ಸಂಪೂರ್ಣ ಹೊತ್ತಿ ಉರಿದಿದ್ದು, ಬಾನೆತ್ತರಕ್ಕೆ ದಟ್ಟ ಹೊಗೆ ಆವರಿಸಿತ್ತು.

ಕದ್ರಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ ತಕ್ಷಣ ಅಲ್ಲಿಂದ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಅವರ ವಾಹನದಲ್ಲಿ ನೀರು ಖಾಲಿಯಾದ ಹಿನ್ನೆಲೆಯಲ್ಲಿ ಪಾಂಡೇಶ್ವರ ಠಾಣೆಯಿಂದ ಇನ್ನೊಂದು ವಾಹನ ಸ್ಥಳಕ್ಕೆ ಆಗಮಿಸಿ ಮಧ್ಯಾಹ್ನ 2 ಗಂಟೆ ತನಕ ಕಾರ್ಯಾಚರಣೆ ನಡೆಸಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿಗೆ ಕಾರ್ಯಾಚರಣೆಗೆ ಪೂರಕವಾಗಿ ತಕ್ಷಣ ಈ ಪರಿಸರದಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಮೆಸ್ಕಾಂ ಲೈನ್‌ಮ್ಯಾನ್‌ಗಳು ಸ್ಥಳಕ್ಕೆ ಬಂದು ವಿದ್ಯುತ್ ಸ್ಥಗಿತಗೊಳಿಸಿ ಕಾರ್ಯಾಚರಣೆಗೆ ಸಹಕಾರ ನೀಡಿದರು.

ಕೃಷ್ಣಾ ಹೆರಿಟೇಜ್ ವಾಸದ ಮನೆಯಾಗಿರದೆ, ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಬಾಡಿಗೆಗೆ ನೀಡಲಾಗುತ್ತಿತ್ತು. ಬೆಂಕಿ ಅವಘಡ ಸಂಭವಿಸಿದಾಗ ತುರ್ತು ಕಾರ್ಯಾಚರಣೆಗೆ ಯಾವುದೇ ಸುರಕ್ಷತಾ ಕ್ರಮವನ್ನು ಅಳವಡಿಸಿರಲಿಲ್ಲ. ಇದರಿಂದಾಗಿ ಬೆಂಕಿಯ ಕೆನ್ನಾಲಿಗೆ ಚಾಚಿ ಮಾಡನ್ನು ಆಹುತಿ ಪಡೆದಿದೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net