

ಬಂಟ್ವಾಳ: ಸಜಿಪಪಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಳೂರು ಗ್ರಾಮದ ಶಾಸ್ತಾನಗರದ ಪ.ಜಾತಿ ಕಾಲನಿಯ ರಸ್ತೆಯ ದುರವಸ್ಥೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿ ಕಾಲನಿ ಸಂಪರ್ಕಕ್ಕೆ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದ್ದರೂ ಅದರ ಪ್ರಯೋಜನ ನಿವಾಸಿಗಳಿಗೆ ಸಿಕ್ಕಿಲ್ಲ. ಈ ಸಮುದಾಯದ ಜನ ಇರುವುದು ಮುಖ್ಯ ರಸ್ತೆಗಿಂತ ತೀರಾ ಒಳಭಾಗದಲ್ಲಿ. ಇಲ್ಲಿನ ರಸ್ತೆಯಲ್ಲಿ ನಡೆದಾಡಲೂ ಕಷ್ಟಪಡಬೇಕಾದ ಸ್ಥಿತಿ ಇದೆ. ವಯಸ್ಸಾದವರ ಪರಿಸ್ಥಿತಿ ಹೇಳುವುದೇ ಬೇಡ. ಈ ಹಿಂದೆ ಪಂಚಾಯಿತಿ ಮತ್ತು ವಿಧಾನಸಭೆ ಚುನಾವಣೆ ಬಂದಾಗ ಅಧಿಕಾರಿಗಳು, ಶಾಸಕ ಯು.ಟಿ.ಖಾದರ್ ಆಗಮಿಸಿ ಕಾಮಗಾರಿಯ ಅಂದಾಜು ವೆಚ್ಚ, ಜಮೀನಿನ ಅಳತೆ ಇತ್ಯಾದಿ ಮಾಡಿಸಿದ್ದರು. ಆದರೆ ಕಾಮಗಾರಿ ಮಾತ್ರ ಶುರು ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.