

ಪುತ್ತೂರು ಗ್ರಾಮಾಂತರ: ಕರ್ನಾಟಕ ಬ್ಯಾಂಕ್ ಕೆಯ್ಯೂರು ಶಾಖೆಯ 8ನೇ ವರ್ಷಕ್ಕೆ ಪದಾರ್ಪಣೆ ಮತ್ತು ಇಬ್ಬರು ಫಲಾನುಭವಿಗಳ ಕುಟುಂಬಕ್ಕೆ ಕೆಬಿಎಲ್ ಸುರಕ್ಷಾ ವಿಮೆ ಮೊತ್ತ ವಿತರಣೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೆಯ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಕೆಯ್ಯೂರು ದುರ್ಗಾಪರಮೇಶ್ವರಿ-ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು ಸಿಬ್ಬಂದಿ ಸೇವೆಯನ್ನು ಶ್ಲಾಘಿಸಿದರು.
ಅಪಘಾತದಲ್ಲಿ ಮೃತಪಟ್ಟ ಕೆಯ್ಯೂರು ಗ್ರಾಮದ ಸತ್ಯನಾರಾಯಣ ರೈ ಮತ್ತು ಮಂಜುನಾಥ ಎಂಬುವರ ಕುಟುಂಬಕ್ಕೆ ಕೆಯ್ಯೂರು ಕರ್ನಾಟಕ ಬ್ಯಾಂಕಿನ ಕೆಬಿಎಲ್ ಸುರಕ್ಷಾ ವಿಮಾ ಮೊತ್ತ 10.15 ಲಕ್ಷ ರೂ. ಹಾಗೂ 5 ಲಕ್ಷ ರೂ.ನ ಚೆಕ್ಕನ್ನು ಬ್ಯಾಂಕ್ ಮ್ಯಾನೇಜರ್ ಸುಬ್ರಹ್ಮಣ್ಯ ಎಂ. ಮತ್ತು ಯುನಿವರ್ಸಲ್ ಸೊಂಪೂ ಜನರಲ್ ಇನ್ಶೂರೆನ್ಸ್ ಕಂಪನಿಯ ಮುಖ್ಯಸ್ಥೆ ನಿವೇದಿತಾ ಹಸ್ತಾಂತರಿಸಿ ಬ್ಯಾಂಕಿನ ಇತರ ವಿಮಾ ಸೌಲಭ್ಯ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಬ್ಯಾಂಕಿನ ಪುತ್ತೂರು ಶಾಖೆಯ ಸೀನಿಯರ್ ಮ್ಯಾನೇಜರ್ ಶ್ರೀಶಾ, ಬ್ಯಾಂಕ್ ಅಧಿಕಾರಿ ಶಿವಶಂಕರ್ ಭಟ್ ಹಾಗೂ ಬ್ಯಾಂಕಿನ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.