ಪೂಜಾಗೆ ಕುದುರಿದ ಲಕ್!

Pooja hegde
Published on

ಟಾಲಿವುಡ್ ಮತ್ತು ಬಾಲಿವುಡ್​ನಲ್ಲಿ ಎರಡರಲ್ಲಿಯೂ ಮಿಂಚುತ್ತಿರುವ ನಟಿಯರ ಪೈಕಿ ಪೂಜಾ ಹೆಗ್ಡೆ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಹಿಂದಿಯಲ್ಲಿಯೂ ಹಲವು ಚಿತ್ರಗಳನ್ನು ಮಾಡುತ್ತಿರುವ ಪೂಜಾ, ಅದೇ ರೀತಿ ದಕ್ಷಿಣ ಭಾರತದ ಕಡೆಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಇದೀಗ ಸೌತ್ ಸ್ಟಾರ್ ವಿಜಯ್ ಅವರ ಚಿತ್ರಕ್ಕೂ ಪೂಜಾ ನಾಯಕಿಯಂತೆ!

ಹೌದು, ‘ಮಾಸ್ಟರ್’ ಯಶಸ್ಸಿನ ಬಳಿಕ ‘ಕೊಲಮಾವು ಕೋಕಿಲ’ ಸಿನಿಮಾ ಖ್ಯಾತಿಯ ನಿರ್ದೇಶಕ ನೆಲ್ಸನ್ ದಿಲೀಪ್​ಕುಮಾರ್ ಜತೆಗೆ ವಿಜಯ್ ಕೈ ಜೋಡಿಸಿದ್ದಾರೆ. ಪಕ್ಕಾ ಮಾಸ್ ಕಮರ್ಷಿಯಲ್ ಶೈಲಿಯ ಈ ಸಿನಿಮಾಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದ್ದಂತೆ ಪೂಜಾ ಹೆಗ್ಡೆ ಹೆಸರು ತಳುಕು ಹಾಕಿಕೊಂಡಿದೆ.

ತೆಲುಗಿನ ಸ್ಟಾರ್ ನಟರಾದ ಪ್ರಭಾಸ್, ಅಲ್ಲು ಅರ್ಜುನ್, ಜೂ. ಎನ್​ಟಿಆರ್, ಮಹೇಶ್ ಬಾಬು ಜತೆಗೆ ಈಗಾಗಲೇ ಪೂಜಾ ನಟಿಸಿದ್ದಾರೆ. 2012ರಲ್ಲಿ ‘ಮುಗಮೂಡಿ’ ಶೀರ್ಷಿಕೆಯ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರಾದರೂ, ಅದಾದ ಬಳಿಕ ತಮಿಳು ಸಿನಿಮಾ ಮಾಡಲೇ ಇಲ್ಲ. ಇದೀಗ ಸುದೀರ್ಘ 9 ವರ್ಷದ ಬಳಿಕ ಮತ್ತೆ ಕಾಲಿವುಡ್ ಪ್ರವೇಶಿಸುವ ಸೂಚನೆ ಸಿಕ್ಕಿದೆ.

ಇತ್ತ ‘ರಾಧೆ ಶ್ಯಾಮ್ ಕೆಲಸಗಳನ್ನು ಮುಗಿಸಿರುವ ಪೂಜಾ, ಇನ್ನೇನು ಶೀಘ್ರದಲ್ಲಿ ಸಲ್ಮಾನ್ ಖಾನ್ ಜತೆಗೆ ‘ಕಭೀ ಈದ್ ಕಭೀ ದಿವಾಲಿ’ ಮತ್ತು ರಣವೀರ್ ಸಿಂಗ್ ‘ಸರ್ಕಸ್’ ಸಿನಿಮಾದ ಶೂಟಿಂಗ್​ನಲ್ಲಿಯೂ ಭಾಗವಹಿಸಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net