ವಿಜಯವಾಣಿ ಸುದ್ದಿಜಾಲ ಕಾಸರಗೋಡು
ತ್ಯಾಜ್ಯಮುಕ್ತ ನವಕೇರಳ ಜಿಲ್ಲಾ ನಿರ್ವಹಣಾ ಸಮಿತಿ ಸಭೆ ಜಿಲ್ಲಾಧಿಕಾರಿ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ತ್ಯಾಜ್ಯಮುಕ್ತ ನವ ಕೇರಳದ ಹಸಿರು ಘೋಷಣೆಗೆ ಸಂಬಂಧಿಸಿದ ಪ್ರಗತಿ ಗುರುತಿಸಿ ಹಸಿರು ಶಾಲೆಗಳು, ಹಸಿರು ಕಚೇರಿಗಳು, ಹಸಿರು ನಗರಗಳು, ಹಸಿರು ಸಾರ್ವಜನಿಕ ಸ್ಥಳಗಳು, ಹಸಿರು ಪ್ರವಾಸೋದ್ಯಮ ಕೇಂದ್ರಗಳು, ಹಸಿರು ಕಾಲೇಜುಗಳು ಮತ್ತು ಹಸಿರು ಗ್ರಂಥಾಲಯಗಳನ್ನು ನಿರ್ಮಿಸಲು ನಿರ್ಣಯಿಸಲಾಯಿತು.
ಶುಚಿತ್ವ ಚಟುವಟಿಕೆಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಚಟುವಟಿಕೆಗಳು, ಎಂಸಿಎಫ್‌ಗಳು, ಮಿನಿ ಎಂಸಿಎಫ್‌ಗಳು, ಮನೆ-ಮನೆ ಸಂಗ್ರಹ ಮತ್ತು ಹರಿತ ಮಿತ್ರಂ ಅಪ್ಲಿಕೇಶನ್ ಅನ್ನು ಮೌಲ್ಯಮಾಪನ ಮಾಡಲಾಯಿತು. ಮಾರ್ಚ್ 30ರ ಮೊದಲು ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ವಾರ್ಡ್‌ನಲ್ಲಿಯೂ ಅಸ್ತಿತ್ವದಲ್ಲಿರುವ ಶುಚಿತ್ವ ಕಾರ್ಯದಲ್ಲಿ ಅಂತರ ಕಂಡು ಬಂದರೆ ಅದನ್ನು ಮೆಗಾ ಕ್ಲೀನಿಂಗ್ ಅಭಿಯಾನದ ಮೂಲಕ ಪೂರ್ಣಗೊಳಿಸಬೇಕು. ಮಾರ್ಚ್ 27ರ ಮೊದಲು ಸಾಮೂಹಿಕ ಶುಚಿತ್ವ ಚಟುವಟಿಕೆ ನಡೆಸುವ ಮೂಲಕ ಎಲ್ಲ ಚರಂಡಿಗಳನ್ನು ಹಾಗೂ ರಸ್ತೆಬದಿ ಸ್ವಚ್ಛಗೊಳಿಸಬೇಕು ಎಂದು ಸೂಚಿಸಲಾಯಿತು.
ಕಾರ್ಯಕಾರಿ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಕಾರ್ಯದರ್ಶಿ ಆಗಿರುವ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್‌ಬೀಗಂ, ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ.ಶೈಮಾ, ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ, ಶುಚಿತ್ವ ಮಿಷನ್ ಸಂಯೋಜಕ ಪಿ.ಜಯನ್, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶ್ಯಾಮಲಕ್ಷ್ಮೀ, ಕೆ.ಎಸ್.ಡಬ್ಲುೃ.ಎಂ.ಪಿ. ಜಿಲ್ಲಾ ಖಾಸಗಿ ವ್ಯವಸ್ಥಾಪಕ ಮಿಥುನ್ ಕೃಷ್ಣನ್ ಭಾಗವಹಿಸಿದ್ದರು. ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕ ಜಿ.ಸುಧಾಕರನ್ ಸ್ವಚ್ಛತಾ ಘೋಷಣೆಯ ಮಾರ್ಗಸೂಚಿ ಮಂಡಿಸಿದರು. ಹಸಿರು ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಮನೋಜ್ ವಂದಿಸಿದರು.
30ರಂದು ಮುಖ್ಯಮಂತ್ರಿಯಿಂದ ಘೋಷಣೆ
ಮಾರ್ಚ್ 30ರಂದು ಮಧ್ಯಾಹ್ನ 2ರಿಂದ 6ರವರೆಗೆ ಮುಖ್ಯಮಂತ್ರಿ ಸ್ವಚ್ಛತಾ ಅಭಿಯಾನದ ಘೋಷಣೆ ಮಾಡಲಿದ್ದಾರೆ. ಪ್ರಸಕ್ತ ಪರಿಸ್ಥಿತಿ ವಿಶ್ಲೇಷಣೆ ಮಾಡಿ ಅದರ ಆಧಾರದ ಮೇಲೆ ಪಂಚಾಯಿತಿಗಳು ಮತ್ತು ನಗರಸಭೆಗಳ ಘೋಷಣೆ ಮಾಡಬೇಕೆಂದು ಸೂಚಿಸಲಾಯಿತು. ಏಪ್ರಿಲ್ 3ರಂದು ಬ್ಲಾಕ್‌ಮಟ್ಟ ಹಾಗೂ ಏಪ್ರಿಲ್ 5ರಂದು ಜಿಲ್ಲಾಮಟ್ಟದಲ್ಲಿ ಘೋಷಣೆ ಮಾಡಲು ನಿರ್ಧರಿಸಲಾಗಿದೆ.