ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್​ ಟೂರ್ನಮೆಂಟ್​​ಗಳಿಗೆ ನಿಷೇಧ; ಪಂದ್ಯಾವಳಿ ನಡೆಸಿದ್ರೆ ಕೇಸ್​!

Cricket
Published on

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳೇ ಗಮನಿಸಿ.. ಯಾರೋ ರಾಜಕಾರಣಿ ಪ್ರಾಯೋಜಕತ್ವ ನೀಡುತ್ತಾರೆ ಎಂದು ಟೂರ್ನಮೆಂಟ್​ಗಳನ್ನು ಆಯೋಜಿಸಿದರೆ ಅನವಶ್ಯವಾಗಿ ಪೊಲೀಸ್ ಕೇಸ್​ ಎದುರಿಸಬೇಕಾದ ಪ್ರಸಂಗ ಎದುರಾಗಬಹುದು. ಏಕೆಂದರೆ ಮುಂದಿನ ಚುನಾವಣೆ ಮುಗಿಯುವವರೆಗೂ ರಾಜಕೀಯಪ್ರೇರಿತ ಯಾವುದೇ ಕ್ರಿಕೆಟ್ ಟೂರ್ನಮೆಂಟ್ ನಡೆಸದಂತೆ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೊಡಬೆಳವಂಗಲದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ವೇಳೆ ಎರಡು ಗುಂಪಿನ ನಡುವಿನ ಮಾರಾಮಾರಿಯಲ್ಲಿ ಇಬ್ಬರು ಯುವಕರು ಚಾಕು ಇರಿತದಿಂದ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಈ ಆದೇಶ ಹೊರಡಿಸಿದ್ದಾರೆ.

ಕ್ರಿಕೆಟ್ ಟೂರ್ನಿಮೆಂಟ್ ವೇಳೆ ನಡೆದ ಇಬ್ಬರ ಕೊಲೆ ಹಿನ್ನೆಲೆಯಲ್ಲಿ ಮುಂಬರುವ 2023ನೇ ವಿಧಾನ ಸಭಾ ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್ ಟೂರ್ನಮೆಂಟ್‌ಗಳನ್ನು ನಡೆಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡಿದ್ದಲ್ಲಿ ಅಂಥವರ ಮೇಲೆ ಕಾನುನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇನ್ನು ದೊಡ್ಡಬೆಳವಂಗಲ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳಗಿನ ಜಾವ ದೊಡ್ಡಬಳ್ಳಾಪುರ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹುಲಿಕುಂಟೆ ಗ್ರಾಮದ ವಿನಯ್ ಹಾಗೂ ತ್ರಿಮೂರ್ತಿ ಬಂಧಿತರು. ಭಾನುವಾರ ಬೆಳಗ್ಗೆ ಡಿ. ಕ್ರಾಸ್ ಮೆಲ್ಸೇತುವೆ ಬಳಿ ಆರೋಪಿಗಳ ಬೆನ್ನಟ್ಟಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಆರು ಆರೋಪಿಗಳು ಪರಾರಿಯಾಗಿದ್ದು ಬಂಧನಕ್ಕೆ ಹುಡುಕಾಟ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net