ಕಾವೇರಿ ವರಿ, ರಾಜಕೀಯ ಮೇಲಾಟ ಇಂದು: ಸರ್ವಪಕ್ಷ ಸಭೆಗೆ ಸರ್ಕಾರ, ಪ್ರತಿಪಕ್ಷ ಸಜ್ಜು; ಸುಪ್ರೀಂ ವಿಚಾರಣೆಗೂ ಮುನ್ನ ರಾಜ್ಯದ ನಿಲುವು ಚರ್ಚೆ

Kaveri (1)
Published on

ಬೆಂಗಳೂರು: ಮಳೆ ಕೊರತೆಯ ನಡುವೆಯೂ ತಮಿಳುನಾಡಿಗೆ ನೀರು ಹರಿಸಿರುವ ಸರ್ಕಾರ ಬುಧವಾರ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿರೋಧ ಎದುರಿಸಲು ಸಜ್ಜಾಗಿದೆ. ಇದೇ ವೇಳೆ ಸರ್ಕಾರ ಕೂಡ ವಿವಿಧ ನೀರಾವರಿ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡದ ಅಸ್ತ್ರವನ್ನು ಬತ್ತಳಿಕೆಯಲ್ಲಿ ಇಟ್ಟುಕೊಂಡಿದೆ.

ಬುಧವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸರ್ವಪಕ್ಷ ಸಭೆ ನಡೆಯಲಿದ್ದು, ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪ್ರಮುಖ ನಾಯಕರಿಗೆ ಸರ್ಕಾರ ಆಹ್ವಾನ ನೀಡಿದೆ. ಕಾವೇರಿ ವಿಚಾರವಾಗಿ ಸುಪ್ರಿಂಕೋರ್ಟ್ ತ್ರಿಸದಸ್ಯ ಪೀಠ ರಚನೆ ಮಾಡುವುದಾಗಿ ಹೇಳಿರುವುದರಿಂದ, ಸಭೆಯಲ್ಲಿ ಸ್ಪಷ್ಟ ನಿರ್ಧಾರ ಅಥವಾ ನಿರ್ಣಯ ತೆಗೆದುಕೊಳ್ಳುವುದು ಅಷ್ಟು ಸಲೀಸಲ್ಲ. ಮುಂದೇನು ಮಾಡಬಹುದೆಂದು ಸರ್ಕಾರವು ಪ್ರತಿಪಕ್ಷಗಳ ನಾಯಕರಿಂದ ಅಭಿಪ್ರಾಯ ಪಡೆಯಲಿದೆ.

ಇದಕ್ಕೂ ಮುನ್ನ ಸರ್ಕಾರವು ಸಭೆಯ ಉದ್ದೇಶವನ್ನು ಪ್ರಸ್ತಾಪಿಸಲಿದ್ದು, ಕಾವೇರಿ ಕೊಳ್ಳದ ಜಲಾಶಯಗಳಲ್ಲಿನ ನೀರಿನ ಲಭ್ಯತೆ, ತಮಿಳುನಾಡಿನ ಒತ್ತಡದ ಬಗ್ಗೆ ವಿವರಿಸಲಿದೆ. ಇದಕ್ಕಾಗಿ ಜಲ ಸಂಪನ್ಮೂಲ ಇಲಾಖೆ ಸಭೆ ನಡೆಸಿ ಮಾಹಿತಿ ಸಿದ್ಧಮಾಡಿಕೊಂಡಿದೆ. ಇದಕ್ಕೆ ಪರ್ಯಾಯವಾಗಿ ಪ್ರತಿಪಕ್ಷ ಬಿಜೆಪಿ ಕಾವೇರಿ ವಿಚಾರದಲ್ಲಿ ಹೋರಾಟಕ್ಕಿಳಿದಿದ್ದು, ಅದೇ ಮೂಡ್​ನಲ್ಲಿರುವ ನಾಯಕರು ಸಭೆಯಲ್ಲಿ ತಮ್ಮ ಆಕ್ಷೇಪಗಳನ್ನೂ ದಾಖಲಿಸಲಿದ್ದಾರೆ. ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ಈ ಬಗ್ಗೆ ವಿಚಾರ ವಿನಿಮಯ ನಡೆದಿದೆ.

ಸರ್ವಪಕ್ಷ ಸಭೆಯಲ್ಲಿ ಕಾವೇರಿ ಹೊರತಾಗಿ ಇತರೆ ನೀರಾವರಿ ಯೋಜನೆ ವಿಚಾರ ಪ್ರಸ್ತಾಪಿಸಬೇಕೆಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಮಹದಾಯಿ, ಮೇಕೆದಾಟು ವಿಷಯದಲ್ಲಿ ಕೇಂದ್ರದ ಮಧ್ಯಸ್ಥಿಕೆ ಬಯಸುವುದು, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಹಣ ಬಿಡುಗಡೆ ಆಗದ ವಿಚಾರವನ್ನೂ ಸಭೆಯಲ್ಲಿ ಚರ್ಚೆ ಮಾಡುವುದು, ಕಾವೇರಿ ಸೇರಿ ಎಲ್ಲ ನೀರಾವರಿ ಯೋಜನೆ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ನಿಯೋಗ ಹೋಗುವ ಬಗ್ಗೆ ನಿರ್ಣಯಿಸಲು ಸಹ ಚಿಂತನೆ ನಡೆದಿದೆ.

ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡವಳಿಕೆ ಆಧಾರದಲ್ಲಿ ಎಲ್ಲವೂ ನಿರ್ಧಾರವಾಗಲಿದೆ. ಒಂದು ವೇಳೆ ಈ ವೇದಿಕೆ ಬಳಸಿಕೊಂಡು ಸರ್ಕಾರದ ಮೇಲೆ ಮುಗಿಬಿದ್ದರೆ ಪ್ರತಿಯಾಗಿ ಕೇಂದ್ರದ ಮೇಲೆ ಒತ್ತಡ ತರುವ ಅಸ್ತ್ರ ಪ್ರಯೋಗಿಸಲು ಸಹ ತೀರ್ವನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತ್ರಿಸದಸ್ಯ ಪೀಠ ರಚನೆ: ಕರ್ನಾಟಕ ನಿಗದಿತ ಪ್ರಮಾಣದಲ್ಲಿ ನೀರನ್ನು ಬಿಟ್ಟಿಲ್ಲ ಎಂದು ಆರೋಪಿಸಿ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ರಚಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಪಿ.ಎಸ್. ನರಸಿಂಹ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪೀಠದ ಸದಸ್ಯರಾಗಿದ್ದಾರೆ. ಶುಕ್ರವಾರದಂದು (ಆ.25) ಈ ನ್ಯಾಯಪೀಠ ಕಾವೇರಿ ವಿವಾದದ ಬಗ್ಗೆ ಎರಡೂ ರಾಜ್ಯಗಳ ವಾದವನ್ನು ಆಲಿಸಲಿದೆ.

ಸರ್ಕಾರದ ಸಮರ್ಥನೆ

  • ನೀರು ಹರಿಸಿದ್ದು ಇದೇ ಮೊದಲಲ್ಲ
  • ಪ್ರಾಧಿಕಾರದ ಸೂಚನೆ ಪಾಲನೆ ಮಾಡಬೇಕಾಗುತ್ತದೆ
  • ಜಲಾಶಯಗಳ ನಿಯಂತ್ರಣ ರಾಜ್ಯ ಸರ್ಕಾರದ ಕೈಯಲ್ಲಿಲ್ಲ
  • ಕಾನೂನು ಹೋರಾಟ ನಡೆಸಲಾಗಿದ
  • ತ್ರಿಸದಸ್ಯ ಪೀಠದಿಂದ ರಕ್ಷಣೆ ಸಿಗುವ ವಿಶ್ವಾಸವಿದೆ
  • ವಸ್ತು ಸ್ಥಿತಿ ನ್ಯಾಯಪೀಠಕ್ಕೆ ತಿಳಿಸಲು ಎಲ್ಲ ಕ್ರಮ.

ಬಿಜೆಪಿ ವಾದ

  • ್ಞಡಿಎಂಕೆ ಸ್ನೇಹಕ್ಕಾಗಿ ಕಾವೇರಿ ನೀರನ್ನು ವ್ಯಾಪಕವಾಗಿ ಹರಿಸಲಾಗಿದೆ.
  • ್ಞಸಂಕಷ್ಟ ಪರಿಸ್ಥಿತಿ ಇದೆ ಎಂಬ ಅಂಶ ಬಿಂಬಿಸುವಲ್ಲಿ ಸರ್ಕಾರ ವಿಫಲ
  • ್ಞನಾಡಿನ ವಿಚಾರದಲ್ಲಿ ಗಟ್ಟಿ ನಿಲುವು ತಾಳಲಿಲ್ಲ, ದೆಹಲಿಯಲ್ಲೊಂದು ಹೇಳಿಕೆ, ಬೆಂಗಳೂರಲ್ಲಿ ಮತ್ತೊಂದು ನಿರ್ಧಾರದ ದ್ವಂದ್ವ

ಜೆಡಿಎಸ್ ನಿಲುವು

  • ನಾಡಿನ ಹಿತ ಮರೆತು ತಮಿಳುನಾಡಿಗೆ ವ್ಯಾಪಕವಾಗಿ ನೀರು ಹರಿಸಿದ್ದು ಸರಿಯಲ್ಲ
  • ಜೆಡಿಎಸ್ ಅವಧಿಯಲ್ಲಿ ನೀರು ಬಿಟ್ಟಿಲ್ಲವೇ ಎಂಬ ಸರ್ಕಾರದ ವಾದವೇ ತಪು್ಪ
  • ಹಳೆಯ ವಿಚಾರ ಕೆದಕಿ ಬಾಯಿ ಮುಚ್ಚಿಸುವ ಪ್ರಯತ್ನ ಸರಿಯಲ್ಲ
  • ನಾಡಿನ ರೈತರ ಹಿತಕ್ಕಾಗಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ.

ಮುಖ್ಯಾಂಶಗಳು

  • ಆ.10ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕಣಿವೆ ರಾಜ್ಯಗಳ ಅಧಿಕಾರಿಗಳ ಸಭೆ ನಡೆಸಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳಿಗೆ ಅನ್ವಯವಾಗುವಂತೆ ನಿತ್ಯವೂ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಪ್ರಾಧಿಕಾರದ ಅಧ್ಯಕ್ಷರು ಕರ್ನಾಟಕಕ್ಕೆ ಸೂಚಿಸಿದ್ದರು.
  • ಕರ್ನಾಟಕ ಈ ಸೂಚನೆಯನ್ನು ತಿರಸ್ಕರಿಸಿತ್ತು. ಕಾವೇರಿ ಕಣಿವೆಯಲ್ಲಿ ಮಳೆ ಕೊರತೆಯಿಂದಾಗಿ ಜಲಾಶಯಗಳು ನಿರೀಕ್ಷಿತ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಈಗಿನ ಮಳೆ ಕೊರತೆಯಿಂದ ಸಂಕಷ್ಟ ವರ್ಷ ಎದುರಾಗುವ ಅಪಾಯವಿದೆ ಎಂಬುದು ರಾಜ್ಯದ ವಾದವಾಗಿತ್ತು.
  • ಆದರೆ, ಆಗಸ್ಟ್ 22ರ ಬಳಿಕ ದಿನಕ್ಕೆ 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಖಚಿತಪಡಿಸಲಾಗುವುದು ಎಂದು ಹೇಳಿತ್ತು. ಇದರಿಂದ ಆಕ್ರೋಶಗೊಂಡಿದ್ದ ತಮಿಳುನಾಡು, ಸಭೆಯಿಂದ ಹೊರನಡೆದು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.
  • ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ನೀರೇ ಇಲ್ಲವೆಂದಿದ್ದರು. ಆದರೆ, 10 ಟಿಎಂಸಿ ನೀರು ಬಿಡುಗಡೆ ಮಾಡುವುದಾಗಿ ಡಿಕೆಶಿ ಸ್ವಯಂಪ್ರೇರಿತವಾಗಿ ಹೇಳಿದ್ದಾರೆ. ಇದಾದ ಮೇಲೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
  • ತಕ್ಷಣದಿಂದ 24 ಟಿಎಂಸಿ ನೀರು ಬಿಡುಗಡೆ ಮಾಡಿಸಲು ಸಂಬಂಧಿಸಿದವರಿಗೆ ಸೂಚನೆ ಕೊಡಬೇಕೆಂದು ತಮಿಳುನಾಡು ಸರ್ಕಾರ ಮತ್ತೊಂದು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದೆ.

ಎಚ್​ಡಿಕೆ ಹಾಜರಿ: ಕಾವೇರಿ ವಿಚಾರದ ಬಗ್ಗೆ ಚರ್ಚೆ ನಡೆಸಲು ಕರೆಯಲಾಗುವ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುತ್ತೇನೆ. ಅಲ್ಲಿ ನಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ಹೇಳಲಾಗುವುದು ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ತಿಳಿಸಿದರು.

ಸರ್ವಪಕ್ಷ ಸಭೆಗೆ ಹೋಗಬೇಕಾದದ್ದು ನನ್ನ ಕರ್ತವ್ಯ. ತಮಿಳುನಾಡಿಗೆ ನೀರು ಬಿಟ್ಟ ಕೂಡಲೇ ಮೊದಲು ಧ್ವನಿ ಎತ್ತಿದವನೇ ನಾನು. ಸರ್ವಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯ ಮಾಡಿದವನು ಕೂಡ ನಾನೇ ಎಂದು ಅವರು ಹೇಳಿಕೊಂಡರು.

ಆದರೆ, ರಾಜ್ಯದ ಹಿತ ಪರಿಗಣನೆಗೆ ಕ್ರಮ ಕೈಗೊಳ್ಳಬೇಕಾದ ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಗಳು, ಯಾವುದೋ ಹಳೆಯ ಟ್ವೀಟ್ ಪ್ರಸ್ತಾಪ ಮಾಡಿದ್ದಾರೆ. ಆ ಟ್ವೀಟ್​ನಲ್ಲಿ ಏನು ಹೇಳಿದ್ದೇನೆ? ಎರಡೂ ರಾಜ್ಯಗಳ ಜನರು ಅಣ್ಣತಮ್ಮಂದಿರ ರೀತಿ ಇರಬೇಕೆಂದು ಹೇಳಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ನೂರಾರು ವರ್ಷ ಹೋರಾಟ ಮಾಡಿ ಆಗಿದೆ. ಈಗ ಕೊಟ್ಟು ತೆಗೆದುಕೊಳ್ಳುವ ಮನಸ್ಸು ಇರಬೇಕು. ತಮಿಳುನಾಡಿನ ರೈತರಿಗೆ ನಾವು ಎಂದೂ ದ್ರೋಹ ಮಾಡಿಲ್ಲ, ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡಬೇಡಿ ಅಂತ ಹೇಳಿದ್ದೇನಿ. ಸ್ಟಾಲಿನ್ ಅವರಿಗೆ ಈ ಮಾತು ಹೇಳಿದ್ದೀನಿ. ಇದರಲ್ಲಿ ಹುಳುಕು ಹುಡುಕುವಂತಹ ಅಂಶ ಏನಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net