

ನವದೆಹಲಿ: ಜನನಿಬಿಡ ಪ್ರದೇಶಗಳಲ್ಲಿ ಕೆಲವು ಪುಂಡರು ಅಪಾಯಕಾರಿ ಸ್ಟಂಟ್ಗಳನ್ನು ಮಾಡುತ್ತ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿರುವ ಹಲವು ನಿದರ್ಶನಗಳು ನಮ್ಮ ಕಣ್ಣು ಮುಂದಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೂ ನಾನಾ ರೀತಿಯ ಕ್ರಮ ಕೈಗೊಂಡರು ಯಾವುದೇ ಪ್ರಯೋಜನವಾಗದಿರುವುದು ಬೇಸರದ ಸಂಗತಿ.
ಇದೀಗ ಘಟನೆಯೊಂದರಲ್ಲಿ ಇಬ್ಬರು ಯುವಕರು ಪೊಲೀಸ್ ಚೌಕಿ ಮುಂಭಾಗದಲ್ಲೇ ಅಪಾಯಕಾರಿ ಬೈಕ್ ಸ್ಟಂಟ್ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಕ್ರಮ ಜರುಗಿಸಿರುವ ಪೊಲೀಸರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರಿಬ್ಬರು ವೇಗವಾಗಿ ಬೈಕ್ ಓಡಿಸಿಕೊಂಡು ಬರುತ್ತಿರುವುದು ಕಂಡು ಬರುತ್ತದೆ. ಪೊಲೀಸ್ ಚೌಕಿ ಕಂಡೊಡನೆ ಸವಾರ ಮುಂಬದಿ ಬ್ರೇಕ್ ಹಿಡಿದು ಸ್ಟಾಪಿ (ಬ್ಯಾಕ್ ವೀಲಿಂಗ್) ಮಾಡುತ್ತಿರುವುದು ಕಂಡು ಬಡುತ್ತದೆ. ಈ ವಿಡಿಯೋವನ್ನು ಮತ್ತೊಂದು ಬೈಕಿನಲ್ಲಿ ಬರುತ್ತಿದ್ದ ಆತನ ಸ್ನೇಹಿತರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಇದನ್ನೂ ಓದಿ: OMG-2 ಖ್ಯಾತಿಯ ನಟ ಪಂಕಜ್ ತ್ರಿಪಾಠಿಗೆ ಪಿತೃವಿಯೋಗ
ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾಕಷ್ಟು ಖಂಡನೆಗೆ ಗುರಿಯಾಗಿತ್ತು. ಪೊಲೀಸ್ ಚೌಕಿ ಮುಂಭಾಗದಲ್ಲೇ ಈ ರೀತಿ ಮಾಡಿದರೆ ಏನು ಅರ್ಥ ಎಂದು ಹಲವರು ಪ್ರಶ್ನಿಸಿದ್ದರು. ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು ಯುವಕನ ವಿರುದ್ಧ ತನಿಖೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಅಪ್ಲೋಡ್ ಮಾಡಿ ಪುಂಡರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಪೊಲೀಸರ ಕಾರ್ಯವನ್ನು ಮೆಚ್ಚಿಕೊಂಡಿರುವ ನೆಟ್ಟಿಗರು ಈ ರೀತಿ ಮಾಡುವ ಪುಂಡರನ್ನು ಜೈಲಿಗೆ ಅಟ್ಟಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಅವನ ಲೈಸೆನ್ಸ್ ರದ್ದುಪಡಿಸಿ ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ ಎಂದು ಹಲವರು ಆಗ್ರಹಿಸಿದ್ದಾರೆ.