

Police officer : ತಮ್ಮ ಮನೆಯನ್ನು ಜಲಾವೃತಗೊಳಿಸಿದ ಪ್ರವಾಹ ನೀರಿಗೆ ಪೊಲೀಸ್ ಅಧಿಕಾರಿಯೊಬ್ಬರು ಹೂವು ಮತ್ತು ಹಾಲು ಅರ್ಪಿಸುತ್ತಿರುವ ವಿಚಿತ್ರ ವಿಡಿಯೋ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಉತ್ತರ ಭಾರತದಾದ್ಯಂತ ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅದರಂತೆ, ವಿಡಿಯೋದಲ್ಲಿರುವ ಪ್ರಯಾಗ್‌ರಾಜ್‌ನ ಎಸ್‌ಐ ಚಂದ್ರದೀಪ್ ನಿಶಾದ್ ಮನೆಯ ನೆಲ ಮಹಡಿ ಕೂಡ ನೀರಿನಿಂದ ಆವೃತಗೊಂಡಿದೆ.
ವಿಡಿಯೋದಲ್ಲಿ ಮೊದಲು ಪೊಲೀಸ್ ಅಧಿಕಾರಿ ಮನೆಯ ಮೇಲಿನಿಂದ ಬಂದು ತನ್ನ ಬೂಟುಗಳನ್ನು ತೆಗೆದು ಪ್ಯಾಂಟ್ ಅನ್ನು ಸ್ವಲ್ಪ ಮೇಲಕ್ಕೆ ಸರಿಸುವುದು ಕಂಡುಬರುತ್ತದೆ. ಇದಾದ ನಂತರ ಅವರು ನೀರಿಗೆ ಹೂವುಗಳನ್ನು ಚೆಲ್ಲುತ್ತಾರೆ. ನಂತರ, ಮಂತ್ರಗಳನ್ನು ಪಠಿಸುತ್ತಾ ಮತ್ತು ಪ್ರಾರ್ಥಿಸುತ್ತಾ ತಮ್ಮ ಕೈಯಲ್ಲಿ ಹಿಡಿದಿದ್ದ ಹಾಲನ್ನು ನೀರಿಗೆ ಸುರಿಯುತ್ತಾರೆ.
ಎಸ್ಐ ನಿಶಾದ್ ಅವರ ಪ್ರಕಾರ ಗಂಗಾ ಮಾತೆಯೇ ತಮ್ಮ ಮನೆಯಲ್ಲಿರುವ ಜನರೆಲ್ಲರನ್ನು ಆಶೀರ್ವದಿಸಲು ಬಂದಿದ್ದಾಳೆ ಎಂದು ನಂಬಿದ್ದಾರೆ.
ಇದಲ್ಲದೆ, ಈ ಎಸ್‌ಐ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಹಿತ್ತಲಿನಲ್ಲಿ ಕೆಸರಿನ ನೀರಿನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಈ ವಿಡಿಯೋ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಎಸ್ಐ ಯಾವ ರೀತಿಯ ಮೂರ್ಖತನ ತೋರಿಸುತ್ತಿದ್ದಾರೆ ನೋಡಿ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ಇವರು ನಿಜವಾಗಿಯೂ ಪೊಲೀಸ್ ಅಧಿಕಾರಿಯೇ ಎಂಬ ಅನುಮಾನಗಳನ್ನೂ ಸಹ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)