ನನಗೂ ಹಣ ಕೊಡು, ಠಾಣೆಗೂ ದುಡ್ಡು ಕೊಡು ಎಂದು ರೌಡಿಶೀಟರ್​ ಬಳಿ ಲಂಚ ಕೇಳಿದ ಇನ್​ಸ್ಪೆಕ್ಟರ್​; ರೌಡಿಶೀಟರ್ ಪರ ಶಾಸಕರ ಶಿಫಾರಸು!

Untitled-1
Published on

ಹಾಸನ: ನನಗೂ ಹಣ ಕೊಡು, ಜೊತೆಗೆ ಪೊಲೀಸ್ ಠಾಣೆಗೂ ದುಡ್ಡು ಕೊಡು ಎಂದು ಇನ್​​ಸ್ಪೆಕ್ಟರ್​ವೊಬ್ಬರು ರೌಡಿಶೀಟರ್​ನಿಂದ ಲಂಚ ಕೇಳಿದ್ದು, ಇದೀಗ ಆ ವಿರುದ್ಧ ಶಾಸಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೌಡಿಶೀಟರ್ ಆಗಿರುವ ಹನೀಫ್​ ಎಂಬಾತನಿಂದ ಇನ್​ಸ್ಪೆಕ್ಟರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಹಾಸನ ಜಿಲ್ಲೆ ಅರಕಲಗೂಡು ಠಾಣೆ ಸರ್ಕಲ್ ಇನ್​ಸ್ಪೆಕ್ಟರ್ ಹೀಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ಶಾಸಕ ಎ.ಟಿ. ರಾಮಸ್ವಾಮಿ ಆರೋಪಿಸಿದ್ದು, ಆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರೌಡಿಶೀಟರ್ ಆಗಿರುವ ಹನೀಫ್​ ಕಳೆದ ಹತ್ತು ವರ್ಷಗಳಿಂದ ಕಾಸರಗೋಡಿನಲ್ಲಿ ನೆಲೆಸಿದ್ದು, ರೌಡಿಯಿಸಂ ಸಂಬಂಧಿತ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ನಾನೇ ಆತನ ಹೆಸರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆಸುವಂತೆ ಶಿಫಾರಸು ಮಾಡಿದ್ದೆ ಎಂಬುದಾಗಿ ಶಾಸಕರು ತಿಳಿಸಿದ್ದಾರೆ.

ತನ್ನ ಹೆಸರನ್ನು ರೌಡಿಶೀಟರ್​ ಪಟ್ಟಿಯಿಂದ ತೆಗೆಯುವಂತೆ ಹನೀಫ್​ ಸೆ. 7ರಂದು ಅರಕಲಗೂಡು ಠಾಣೆಗೆ ಬಂದು ಮನವಿ ಸಲ್ಲಿಸಿದ್ದ. ಆದರೆ ಈ ವೇಳೆ ನನಗೆ 50 ಸಾವಿರ ರೂ. ಕೊಡಬೇಕು. ಹಾಗೆಯೇ ಠಾಣೆಗೆ 25 ಸಾವಿರ ರೂ. ಕೊಡಬೇಕು. ಹಾಗಿದ್ದರೆ ಮಾತ್ರ ರೌಡಿಶೀಟರ್ ಪಟ್ಟಿಯಿಂದ ಹೆಸರು ಕೈಬಿಡಲು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಇನ್​ಸ್ಪೆಕ್ಟರ್​ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದಾಗಿ ಶಾಸಕ ರಾಮಸ್ವಾಮಿ ಆರೋಪಿಸಿದ್ದಾರೆ.

ಲಂಚ ಕೇಳಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದೇನೆ. ನಾವು ಹೇಳಿದ ಪ್ರಕರಣದ ಗತಿಯೇ ಹೀಗಾದರೆ ಬೇರೆಯವರ ಪರಿಸ್ಥಿತಿ ಏನು ಎಂದು ಊಹಿಸಲು ಸಾಧ್ಯವಿಲ್ಲ. ಹಣ ಕೊಟ್ಟರೆ ಪಟ್ಟಿಯಿಂದ ಹೆಸರು ತೆಗೆಯುವುದು, ಹಣ ಕೊಡದಿದ್ದರೆ ರೌಡಿಶೀಟರ್ ಪಟ್ಟಿಗೆ ಸೇರಿಸುವುದು ಅಪಾಯಕಾರಿ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net