ಬಾಯಿ ತೆರೆದ್ರೆ ಬಣ್ಣ ಬಯಲು ಅನ್ನೋದಿಲ್ಲಿ ಅಕ್ಷರಶಃ ನಿಜವಾಗಿದೆ; ಈತನ ತೆರೆದ ಬಾಯಿ ನೋಡಿದ್ರೆ ನೀವೂ ದಂಗಾಗಬಹುದು!

ಫೀಚರ್‌
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಹೆಣ ಹೊರುವವರಿಗೆ ಹಿಂದಾದ್ರೇನು, ಮುಂದಾದ್ರೇನು? ಎಂಬ ಮಾತನ್ನೇ ಇಲ್ಲಿ ಸ್ವಲ್ಪ ಬದಲಿಸಿ ಹೇಳಬಹುದು. ಕಳ್ಳ ಸಾಗಣೆದಾರರಿಗೆ ದೊಡ್ಡ ಕರುಳಿನ ಆ ತುದಿಯಾದ್ರೇನು ಈ ತುದಿಯಾದ್ರೇನು?!

ಹೌದು.. ಕಳ್ಳಸಾಗಣೆದಾರರು ಗುದದ್ವಾರದಲ್ಲಿ ಚಿನ್ನ ಇಟ್ಟುಕೊಂಡು ಬರುತ್ತಿದ್ದ, ಚಿನ್ನವನ್ನು ನುಂಗಿ ಹೊಟ್ಟೆಯಲ್ಲಿ ಇಟ್ಟುಕೊಂಡು ಬರುತ್ತಿದ್ದ ಸಾಕಷ್ಟು ಪ್ರಕರಣಗಳು ಬಯಲಾಗಿವೆ. ಇದೀಗ ಒಬ್ಬ ಕರುಳಿನ ಆ ತುದಿಯ ಬದಲಿಗೆ ಈ ತುದಿಯಲ್ಲಿ ಅರ್ಥಾತ್‌ ಬಾಯಿಯಲ್ಲಿ ಭಾರಿ ಪ್ರಮಾಣದ ಚಿನ್ನ ಇಟ್ಟುಕೊಂಡು ಬಂದಿದ್ದಾನೆ. ಈತನ ಪಾಲಿಗೆ ಬಾಯಿ ತೆರೆದರೆ ಬಣ್ಣ ಬಯಲು ಎಂಬುವುದು ಅಕ್ಷರಶಃ ನಿಜವಾಗಿದೆ.

ಉಜ್ಬೇಕಿಸ್ತಾನದ ಇಬ್ಬರು ಪ್ರಜೆಗಳು ಹಲ್ಲುಗಳ ನಡುವಿನ ಸಂದಿಯಲ್ಲಿ ಚಿನ್ನದ ಗಟ್ಟಿಯನ್ನು ಇರಿಸಿಕೊಂಡು ಬಂದು ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.  ಹೋದ ಹಲ್ಲಿನ ಜಾಗದಲ್ಲಿ ಶ್ರೀಮಂತರು ಚಿನ್ನದ ಹಲ್ಲು ಕೂರಿಸಿಕೊಳ್ಳುವುದಿದೆ. ಆದರೆ ಈ ಖದೀಮರು ಹಲ್ಲುಗಳ ಸಂದಿಯಲ್ಲಿ ಚಿನ್ನದ ಗಟ್ಟಿಯನ್ನೇ ಇರಿಸಿಕೊಂಡು ಬಂದು ಕಸ್ಟಮ್ಸ್‌ ಅಧಿಕಾರಿಗಳೂ ಒಮ್ಮೆ ದಂಗಾಗುವಂತೆ ಮಾಡಿದ್ದಾರೆ.

ದುಬೈನಿಂದ ಆಗಸ್ಟ್‌ 28ರಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಿದ್ದ ಇವರನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಇವರು ಕೊನೆಯಲ್ಲಿ ಸ್ಮಗ್ಲಿಂಗ್‌ ಬಗ್ಗೆ ʼಬಾಯಿ ಬಿಡಲೇ ಬೇಕಾಯಿತು.ʼ ಆರೋಪಿಗಳಿಂದ 951 ಗ್ರಾಂ ಚಿನ್ನದ ಗಟ್ಟಿ ಜತೆಗೆ ಬಾಯಿಯಲ್ಲಿ ಇರಿಸಿಕೊಂಡಿದ್ದ ಒಂದು ಚಿನ್ನದ ಚೈನನ್ನೂ ವಶಪಡಿಸಿಕೊಳ್ಳಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net