

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಬೆಂಗಳೂರು: ರಾಜ್ಯ ಪೊಲೀಸರಿಗೆ ಸವಾಲಾಗಿದ್ದ ಅಪರಿಚಿತ ಶವಗಳ ಗುರುತು ಪತ್ತೆಗೆ ಕೊಂಚ ಮುಕ್ತಿ ಸಿಕ್ಕಂತೆ ಆಗಿದೆ. ಮೊಬೈಲ್& ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಂ (ಎಂ&ಸಿಸಿಟಿಎನ್ಎಸ್) ಬಳಸಿಕೊಂಡು ಅಪರಿಚಿತ ಶವಗಳ ಗುರುತು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ದಾವಣಗೆರೆ ಜಿಲ್ಲೆ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಹತ್ಯೆಗೆ ಒಳಗಾಗಿದ್ದ ಅಪರಿಚಿತವ್ಯಕ್ತಿ ಗುರುತನ್ನು ಎಂ&ಸಿಸಿಟಿಎನ್ಎಸ್ ಸಹಾಯದಿಂದ ಪತ್ತೆಹಚ್ಚಿದ್ದು, ರಾಜ್ಯದಲ್ಲಿ ಮೊದಲ ಪ್ರಕರಣ ಎನ್ನಲಾಗಿದೆ.
ರಾಜ್ಯದಲ್ಲಿ ಪ್ರತಿದಿನ 7 ರಿಂದ 10 ಅಪರಿಚಿತ ಶವಗಳು ಪತ್ತೆಯಾಗುತ್ತಿವೆ. ಅಂದರೇ ತಿಂಗಳಿಗೆ ಅಂದಾಜು 200 ರಿಂದ 250 ಶವಗಳ ಗುರುತು ಪತ್ತೆಯಾಗುತ್ತಿಲ್ಲ. ಈ ಶವಗಳು ಕೊಲೆ, ಆತ್ಮಹತ್ಯೆ, ಅನಾರೋಗ್ಯದಿಂದ ಸಾವು, ಸಹಜ ಸಾವು, ಅಪಘಾತ ಇನ್ನಿತ್ತರ ಕಾರಣಗಳಿಂದ ಪ್ರಾಣ ಬಿಟ್ಟಿರುತ್ತವೆ. ಮೃತ ದೇಹದಲ್ಲಿ ಯಾವುದೇ ಗುರುತಿನ ಚೀಟಿ, ಮುಖ ಚಹರೆ, ಮೊಬೈಲ್ ಸಿಗದೆ ಹೆಸರು ವಿಳಾಸ ಮತ್ತು ವಾರಸುದಾರರನ್ನು ಪತ್ತೆ ಮಾಡುವಲ್ಲಿ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಶೇ.10 ಗುರುತು ಪತ್ತೆಯಾದರೇ ಹೆಚ್ಚು. ಉಳಿ ಶವಗಳಿಗೆ ಕಾನೂನು ಪ್ರಕಾರ ಪೊಲೀಸರೇ ಶವ ಸಂಸ್ಕಾರ ನಡೆಸುತ್ತಾರೆ.
ಎಂ&ಸಿಸಿಟಿಎನ್ಎಸ್ನಲ್ಲಿ ಎಲ್ಲ ಅಪರಾಧಿಗಳ ಬೆರಳಚ್ಚು, ಮುಖ ಚಹರೆ, ಹೆಸರು, ವಿಳಾಸ, ಆಧಾರ್ ಮಾಹಿತಿ ಸಂಗ್ರಹಿಸಿದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯ ಮಾಹಿತಿ ಒಮ್ಮೆ ಅಪ್ಲೋಡ್ ಆದರೆ, ದೇಶದ ಯಾವ ಪ್ರದೇಶದಲ್ಲಿ ಬೇಕಾದರು ಆತನ ಮಾಹಿತಿ ಲಭ್ಯವಾಗಲಿದೆ.
ಪೊಲೀಸರು ಗಸ್ತು ಮತ್ತು ನಾಕಬಂದಿ ಕರ್ತವ್ಯದ ವೇಳೆ ರಾತ್ರಿ ಓಡಾಡುವ ವ್ಯಕ್ತಿಗಳ ಬೆರಳಚ್ಚನ್ನು ಮೊಬೈಲ್ ಅಪ್ಲಿಕೇಷನ್ನಲ್ಲಿ ಪರಿಶೀಲನೆಗೆ ಬಳಸುತ್ತಿದ್ದಾರೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ ಅಥವಾ ಕದ್ದಿರುವ ವಾಹನವಾಗಿದ್ದರೇ ತಕ್ಷಣ ತಿಳಿಯಲಿದೆ. ಇದೀಗ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗೂ ಬಳಸಿದ್ದು, ಯಶಸ್ವಿಯಾಗಿದೆ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ಮಾಹಿತಿ ಹಂಚಿಕೊಂಡಿದ್ದಾರೆ.
ಮೊಬೈಲ್ ಕೆಮ್ ಮತ್ತು ಕ್ರಿಮಿನಲ್ ಟ್ರಾಕಿಂಗ್ ನೆಟ್ವರ್ಕ್ ಸಿಸ್ಟಂ (ಎಂ&ಸಿಸಿಟಿಎನ್ಎಸ್) ಯೋಜನೆಯು ಕೇಂದ್ರ ಸರ್ಕಾರದ ಮಿಷಿನ್ಮೋಡ್ ಪ್ರಾಜೆಕ್ಟ್ಗಳಲ್ಲಿ ಒಂದಾಗಿದೆ. ದೇಶದಲ್ಲಿ ಒಂದೇ ಮಾದರಿ ಪೊಲೀಸಿಂಗ್, ಅಪರಾಧ ಮತ್ತು ಅಪರಾಧಿಗಳ ಟ್ರ್ಯಾಕಿಂಗ್ ಮಾಡುವ ಉದ್ದೇಶ ಮತ್ತು ತ್ವರಿತಗತಿಯ ತನಿಖೆ, ಆರೋಪಿಗಳ ಪತ್ತೆಹಚ್ಚುವ ಕಾರ್ಯವನ್ನು ಗಣಕೀಕರಣದ ಉದ್ದೇಶ ಇದಾಗಿದೆ. ಕ್ರಿಮಿನಲ್ ಕೇಸಿನಲ್ಲಿ ಆರೋಪಿ ಸಿಕ್ಕಿಬಿದ್ದರೇ ಆತನ ಬೆರಳಚ್ಚು, ಪೋಟೋ, ವಿಳಾಸ, ಆಧಾರ್, ಮೊಬೈಲ್ ನಂಬರ್ ನಂಬರ್ ಸಂಗ್ರಹಿಸಲಾಗುತ್ತದೆ. ಮಾಬೈಲ್ ಮಾದರಿ ಡಿವೈಸ್ನ್ನು ಎಲ್ಲ ಪೊಲೀಸ್ ಠಾಣೆಗೆ ವಿತರಿಸಲಾಗಿದೆ. ಅಪರಿಚಿತ ವ್ಯಕ್ತಿ ಬೆರಳಚ್ಚುನ್ನು ಎಂ&ಸಿಸಿಟಿಎನ್ಎಸ್ನಲ್ಲಿ ಪರಿಶೀಲನೆ ನಡೆಸಿದಾಗ ಕ್ರಿಮಿನಲ್ ಹಿನ್ನೆಲೆ ಇದ್ದರೇ ಮಾಹಿತಿ ಸಿಗಲಿದೆ. ಇಲ್ಲವಾದರೆ, ಅಸಾಧ್ಯ.
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಆಧಾರ್ ಸಹಾಯದಿಂದ ಅಪರಿಚಿತ ಶವಗಳ ಗುರುತು ಪತ್ತೆಗೆ ಪೊಲೀಸ್ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ, ಯುಐಡಿಎಐ ಒಪ್ಪಿರಲಿಲ್ಲ.
ಎಂ&ಸಿಸಿಟಿಎನ್ಎಸ್ ತಂತ್ರಜ್ಞಾನದಿಂದ ಅಪರಿಚಿತ ಶವಗಳ ಗುರುತು ಪತ್ತೆಹಚ್ಚಲು ಸಾಧ್ಯವಾಗಿದೆ. ಇದರೊಂದು ಅನಿರೀತ ಪ್ರಯೋಜನವಾಗಿದ್ದು, ಪೊಲೀಸ್ ಇಲಾಖೆಗೆ ಅನುಕೂಲವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವಿಣ್ ಸೂದ್ ಹೇಳಿದ್ದಾರೆ.