

ಹೈದರಾಬಾದ್: ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಸದ್ಯ ಪುಷ್ಪ 2 ಸಿನಿಮಾದ ಪ್ರಚಾರದಲ್ಲಿ ಬಿಜಿ ಇರುವುದು ಗೊತ್ತೆ ಇದೆ. ಇತ್ತೀಚೆಗೆ ಅವರು ಚಿತ್ರದ ಪ್ರಚಾರಕ್ಕೆಂದು ಮುಂಬೈಗೆ ಭೇಟಿ ನೀಡಿದ್ದರು. ಕಾರ್ಯಕ್ರಮದಲ್ಲಿ ಅವರು ಬಳಸಿರುವ ಪದವೊಂದು ಅವರಿಗೆ ಕಂಟಕವಾಗಿದೆ. ಆ ಪದ ಬಳಕೆ ಮಾಡಿದ ಕಾರಣಕ್ಕಾಗಿಯೇ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಾಗಿದೆ.
ಶ್ರೀನಿವಾಸ್ ಗೌಡ್ ಎಂಬ ವ್ಯಕ್ತಿ ಅಲ್ಲು ಅರ್ಜುನ್ ವಿರುದ್ಧ ಹೈದರಾಬಾದ್‌ನ ಜವಾಹರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲು ಅರ್ಜುನ್ ತಮ್ಮ ಪ್ರಚಾರದಲ್ಲಿ ಅನೇಕ ವೇಳೆ ಈ ಪದವನ್ನು ಬಳಸಿದ್ದಾರೆ. ಆ ಪದವನ್ನು ಅವರು ಮತ್ತೆ ಬಳಸಬಾರದು ಎಂದು ಒತ್ತಾಯಿಸಿದ್ದಾರೆ.
ಅಸಲಿಗೆ ಅಲ್ಲು ಅರ್ಜುನ್ ಈ ಪ್ರಚಾರದ ವೇಳೆ ನನಗೆ ಅಭಿಮಾನಿಗಳಿಲ್ಲ, ನನ್ನ ಬಳಿ 'ಸೇನೆ' ಇದೆ ಎಂದಿದ್ದರು. ನನಗೆ ಅಭಿಮಾನಿಗಳಿಲ್ಲ, ನನ್ನ ಬಳಿ ಸೈನ್ಯವಿದೆ. ನಾನು ನನ್ನ ಅಭಿಮಾನಿಗಳನ್ನು ಪ್ರೀತಿಸುತ್ತೇನೆ. ಅವರು ನನ್ನ ಕುಟುಂಬದವರಂತೆ, ಅವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಮತ್ತು ನನ್ನನ್ನು ಸ್ವೀಕರಿಸುತ್ತಾರೆ. ಅವರು ಸೈನ್ಯದಂತೆ ನನ್ನ ಪರವಾಗಿ ನಿಂತಿದ್ದಾರೆ. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ, ನಾನು ನಿನ್ನನ್ನು ಹೆಮ್ಮೆ ಪಡುವಂತೆ ಮಾಡುತ್ತೇನೆ. ಈ ಚಿತ್ರ ದೊಡ್ಡ ಹಿಟ್ ಆದಲ್ಲಿ ನನ್ನ ಎಲ್ಲ ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದರು.
ಆದರೀಗ ಶ್ರೀನಿವಾಸ್ ಗೌಡ್ ಎಂಬ ವ್ಯಕ್ತಿ ಯಾವುದೇ ಅಭಿಮಾನಿ ಬಳಗಕ್ಕೆ ಆರ್ಮಿ ಎಂಬ ಬಿರುದು ನೀಡುವುದು ಸರಿಯಲ್ಲ ಎಂದು ಹೇಳಿ ದೂರು ದಾಖಲಿಸಿದ್ದಾರೆ. ಸೈನ್ಯ ಎಂಬ ಪದವು ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಸಶಸ್ತ್ರ ಪಡೆಗಳೊಂದಿಗೆ ಆಳವಾಗಿ ಸಂಬಂಧಿಸಿದೆ, ಇದನ್ನು ಈ ರೀತಿ ಬಳಸಬಾರದು. ಈ ರೀತಿ ಬಳಸಿದರೆ ಅದು ಅವಮಾನಿಸಿದಂತೆ. ಸೇನೆ ಎಂದರೆ ರಾಷ್ಟ್ರೀಯ ಸಮಗ್ರತೆ ಮತ್ತು ದೇಶದ ಭದ್ರತೆ, ಆದರೆ ಇದೆಲ್ಲವನ್ನೂ ಕಡೆಗಣಿಸಿ ಹಲವು ವೇದಿಕೆಗಳಲ್ಲಿ ಸೇನೆಯನ್ನು ಹೊಂದಿರುವುದಾಗಿ ಅಲ್ಲು ಅರ್ಜುನ್ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.
ಶ್ರೀನಿವಾಸ್ ಗೌಡ್ ಅವರು ಗ್ರೀನ್ ಪೀಸ್ ಎನ್ವಿರಾನ್ಮೆಂಟ್ ಮತ್ತು ವಾಟರ್ ಹಾರ್ವೆಸ್ಟಿಂಗ್ ಫೌಂಡೇಶನ್ ಅಧ್ಯಕ್ಷರಾಗಿದ್ದಾರೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸುಕುಮಾರ್ ನಿರ್ದೇಶನದ ಪುಷ್ಪ 2: ದಿ ರೂಲ್ ಸಿನಿಮಾಕ್ಕಾಗಿ ಅಭಿಮಾನಿಗಳ ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾವನ್ನು ಡಿಸೆಂಬರ್ 5ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್)