ಅಂತೂ ಡ್ರೀಮ್​-11 ವಿರುದ್ಧ ಎಫ್​ಐಆರ್; ಆನ್‌ಲೈನ್ ಜೂಜಾಟದ ವಿರುದ್ಧ ಮೊದಲ ಕೇಸ್ ದಾಖಲು

Dream 11
Published on

ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಸ್ಕಿಲ್​ ಗೇಮ್, ಬೆಟ್ಟಿಂಗ್ ಮತ್ತು ಜೂಜಾಟ ನಿಷೇಧದ ನಡುವೆಯೂ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆನ್‌ಲೈನ್ ಆ್ಯಪ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇದು ರಾಜ್ಯದಲ್ಲೇ ಮೊದಲನೇ ಪ್ರಕರಣ ದಾಖಲಾಗಿದೆ.

ಅನ್ನಪೂರ್ಣೇಶ್ವರಿನಗರದ ಮಂಜುನಾಥ್ ಎಂಬವರು ನೀಡಿದ್ದ ದೂರಿನ ಮೇರೆಗೆ ಮುಂಬೈ ಮೂಲದ ಡ್ರೀಮ್​ ಸ್ಪೋರ್ಟ್ಸ್​ ಕಂಪನಿಯ ಕ್ರಿಕೆಟ್ ಬೆಟ್ಟಿಂಗ್ ‘ಡ್ರೀಮ್​-11’ ಆ್ಯಪ್ ವಿರುದ್ಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಮತ್ತು ಸ್ಕಿಲ್​ ಗೇಮ್‌ಗಳನ್ನು ನಿಷೇಧಿಸುವ ಸಲುವಾಗಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ವಿಧಾನಸಭೆ ಅನುಮೂದನೆ ನೀಡಿತ್ತು. ಕಾಯ್ದೆ ಜಾರಿಗೊಂಡ ಬಳಿಕವು ಡ್ರೀಮ್​-11 ಆ್ಯಪ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆದಿದೆ ಎಂದು ಆರೋಪಿಸಿ ಮಂಜುನಾಥ್ ದೂರು ನೀಡಿದ್ದರು. ಹೊಸ ಕಾಯ್ದೆ ಅನ್ವಯ ಆ್ಯಪ್ ಕಂಪನಿ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಹಣವನ್ನು ಪಣವಾಗಿರಿಸಿ ಆಡುವ ಎಲ್ಲ ರೀತಿಯ ಆಟಗಳನ್ನು ಆನ್‌ಲೈನ್ ಜೂಜು ಎಂದು ರಾಜ್ಯ ಸರ್ಕಾರ ಪರಿಗಣಿಸಿದೆ. ನಗದು ಮಾತ್ರವಲ್ಲದೆ ವರ್ಚುಯಲ್ ಕರೆನ್ಸಿ, ಡಿಜಿಟಲ್ ಕರೆನ್ಸಿ, ಎಲೆಕ್ಟ್ರಾನಿಕ್ ಮನಿ, ಎಲೆಕ್ಟ್ರಾನಿಕ್ ಟ್ರಾನ್ಸ್‌ಫರ್ ಆಫ್ ಫಂಡ್ಸ್, ಪಾಯಿಂಟ್ಸ್ ರೂಪದ ಹಣ ಸೇರಿ ಯಾವುದೇ ಸ್ವರೂಪದಲ್ಲೂ ಹಣವನ್ನು ಪಣವಾಗಿಟ್ಟು ಜೂಜಿನಲ್ಲಿ ತೊಡಗುವವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಕ್ರಮ ಜರಗಿಸಬಹುದು.

ರಾಜ್ಯ ಒಳಗೆ ಮತ್ತು ಹೊರಗೆ ಆನ್‌ಲೈನ್ ಜೂಜಾಟಕ್ಕೆ ವೇದಿಕೆ ಕಲ್ಪಿಸುವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹೊಸ ಕಾಯ್ದೆಯಲ್ಲಿ ಅವಕಾಶವಿದೆ. ಕಂಪ್ಯೂಟರ್, ಮೊಬೈಲ್​ಫೋನ್​ ಅಪ್ಲಿಕೇಷನ್, ವರ್ಚುಯಲ್ ಪ್ಲಾಟ್‌ಫಾರಂ, ಇಂಟರ್‌ನೆಟ್, ಸೈಬರ್ ಸ್ಪೇಸ್, ಕಂಪ್ಯೂಟರ್ ನೆಟ್‌ವರ್ಕ್, ಎಲೆಕ್ಟ್ರಾನಿಕ್ ಡಿಜಿಟಲ್ ರೂಪದ ದಾಖಲೆಗಳನ್ನು ಸೇರಿ ಎಲ್ಲ ಮಾದರಿಯ ಜೂಜಾಟಗಳನ್ನು ಕಾಯ್ದೆ ವ್ಯಾಪ್ತಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net