ಅಧಿಕ ಲಾಭದ ಹೆಸರಿನಲ್ಲಿ ವಂಚನೆ.. ಅಸ್ಸಾಂನಲ್ಲಿ ಬೆಳಕಿಗೆ ಬಂತು 2200 ಕೋಟಿ ಹಗರಣ!

scam
Published on

ದಿಸ್ಪುರ: ಅಸ್ಸಾಂನಲ್ಲಿ ಭಾರಿ ಹಣಕಾಸು ಹಗರಣವೊಂದು ಬೆಳಕಿಗೆ ಬಂದಿದೆ. ಅಧಿಕ ಲಾಭದ ಹೆಸರಿನಲ್ಲಿ ಇಬ್ಬರು ಯುವಕರು 2,200 ಕೋಟಿ ರೂ.ಗಳ ವಂಚನೆ ಮಾಡಿದ್ದು, ಹಗರಣವನ್ನು ಅಸ್ಸಾಂ ಪೊಲೀಸರು ಭೇದಿಸಿದ್ದಾರೆ.

ದಿಬ್ರುಗಢದ ವಿಶಾಲ್ (22) ಮತ್ತು ಗುವಾಹಟಿಯ ಸ್ವಪ್ನಿಲ್ ದಾಸ್ ಬಂಧಿತರು. ಸ್ನೇಹಿತರಾಗಿದ್ದ ಇವರು ಸುಲಭವಾಗಿ ಹಣ ಗಳಿಸಲು ಮುಂದಾಗಿ ಜನರನ್ನು ಆಮಿಷಗಳನ್ನೊಡ್ಡಿ ವಂಚಿಸಿದ್ದಾರೆ.

ಈ ವಂಚಕರು ಹೂಡಿಕೆದಾರರಿಗೆ 60 ದಿನಗಳಲ್ಲಿ ತಮ್ಮ ಹೂಡಿಕೆಯ ಮೇಲೆ 30 ಪ್ರತಿಶತದಷ್ಟು ಲಾಭದ ಭರವಸೆ ನೀಡಿದ್ದರು. ಆಮಿಷಕ್ಕೆ ಒಳಗಾಗಿದ್ದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಜನರು 2 ಸಾವಿರದ 200 ಕೋಟಿ ರೂ.ಹೂಡಿಕೆ ಮಾಡಿದ್ದರು. ಸಂತ್ರಸ್ತರೆಲ್ಲರೂ ತಾವು ಮೋಸ ಹೋಗಿರುವುದನ್ನು ಅರಿತು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ತನಿಖೆ ನಡೆಸಿದಾಗ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಹೂಡಿಕೆದಾರರನ್ನು ಆಕರ್ಷಿಸಲು ವಿಶಾಲ್ ನಾಲ್ಕು ನಕಲಿ ಕಂಪನಿಗಳನ್ನು ಸ್ಥಾಪಿಸಿದ್ದ. ಜನರ ಹಣವನ್ನು ಅವನು ಫಾರ್ಮಾಸ್ಯುಟಿಕಲ್ಸ್, ಪ್ರೊಡಕ್ಷನ್ ಮತ್ತು ಕನ್ಸ್ಟ್ರಕ್ಷನ್ ಕಂಪನಿಗಳಲ್ಲಿ ಹೂಡಿಕೆ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ, ಸ್ವಲ್ಪ ಹಣವನ್ನು ಅಸ್ಸಾಮಿ ಚಿತ್ರಗಳಲ್ಲಿ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.

ದಿಬ್ರುಗಢ್‌ನಲ್ಲಿರುವ ವಿಶಾಲ್ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಹಣಕಾಸು ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆತನೊಂದಿಗೆ ಸಂಬಂಧ ಹೊಂದಿರುವ ಅಸ್ಸಾಮಿ ನೃತ್ಯ ನಿರ್ದೇಶಕಿ ಸುಮಿ ಬೋರಾಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

ವಂಚಕರ ಮಾತುಗಳನ್ನು ನಂಬಿ ಮೋಸಹೋಗಬೇಡಿ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಸಲಹೆ ನೀಡಿದ್ದಾರೆ. ಹಣಕಾಸು ಹಗರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. “ಆನ್‌ಲೈನ್ ಟ್ರೇಡಿಂಗ್ ಸಂಸ್ಥೆಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಯಾವುದೇ ಕಾನೂನು ವ್ಯವಸ್ಥೆ ಇಲ್ಲ. ವಂಚಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಂತಹ ಮೋಸದ ಜಾಲಗಳಿಂದ ದೂರವಿರುವಂತೆ ಅವರು ಜನರನ್ನು ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net