ನಾನು ಕರೊನಾ ಸೋಂಕಿತರನ್ನು ಗುಣಪಡಿಸುತ್ತೇನೆ ಎನ್ನುತ್ತಿದ್ದ ಕರೊನಾ ಬಾಬ ಬಂಧನ

corona baba
Published on

ಲಕ್ನೋ: ಕರೊನಾ ವೈರಸ್​ ಬಂದಾಗಿನಿಂದ ಜನರು ಬೇರೆಲ್ಲಾ ಚಿಂತೆಗಳನ್ನು ಬಿಟ್ಟು ಕರೊನಾ ಚಿಂತೆಯಲ್ಲಿಯೇ ಮುಳುಗಿದ್ದಾರೆ. ಜನರ ಈ ಚಿಂತೆಯನ್ನೇ ದುರ್ಬಳಕೆ ಮಾಡಿಕೊಂಡಿರುವ ಅನೇಕರು ವದಂತಿಗಳನ್ನು ಹಬ್ಬಿಸಿದ್ದಾರೆ. ಇನ್ನು ಕೆಲವರು ತಾವು ವೈದ್ಯಕೀಯ ನೆರವಿಲ್ಲದೆ ಕರೊನಾ ರೋಗವನ್ನು ಗುಣಪಡಿಸುವುದಾಗಿ ನಂಬಿಸಿ ಜನರಿಂದ ಹಣ ಕೀಳುತ್ತಿದ್ದಾರೆ. ಅದೇ ರೀತಿಯಲ್ಲಿ ಯಂತ್ರ ತೊಡಿಸಿ ಕರೊನಾ ಓಡಿಸುತ್ತೇನೆ ಎಂದು ಹಣ ಸಂಪಾದನೆ ಮಾಡುತ್ತಿದ್ದ ಕರೊನಾ ಬಾಬನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ದಲಿಗಂಜ್​ ನಗರ ಪ್ರದೇಶದಲ್ಲಿ ಅಹ್ಮನ್​ ಸಿದ್ದಿಕ್​ ಹೆಸರಿನ ವ್ಯಕ್ತಿಯೊಬ್ಬ ತನ್ನ ಅಂಗಡಿಯ ಎದುರು ತನ್ನಲ್ಲಿ ಕರೊನಾ ಗುಣಪಡಿಸುವ ಶಕ್ತಿಯಿದೆ ಎಂದು ಬರೆದುಕೊಂಡಿದ್ದ. ಕರೊನಾ ತಡೆಗಟ್ಟಲು ಮಾಸ್ಕ್​ನ ಬದಲಾಗಿ ತಾನು ಕೊಡುವ ಯಂತ್ರವನ್ನು ಧರಿಸಿ ಎಂದು ಆತ ಹೇಳಿಕೊಂಡಿದ್ದ. ತನ್ನ ಯಂತ್ರದಿಂದ ಈಗಾಗಲೇ ಹಲವು ಜನ ಕರೊನಾ ಸೋಂಕಿತರು ಗುಣಮುಖರಾಗಿದ್ದಾರೆ ಎಂದೂ ಸಹ ಆತ ಹೇಳಿಕೊಂಡಿದ್ದ. ಒಂದು ಯಂತ್ರಕ್ಕೆ 11 ರೂಪಾಯಿಯಂತೆ ಮಾರುತ್ತಿದ್ದ ಆತನನ್ನು ನಂಬಿದ್ದ ಅನೇಕ ಅಮಾಯಕರು ಆತನಿಂದ ಯಂತ್ರವನ್ನು ಖರೀದಿಸಿದ್ದರು.

ಈ ವಿಚಾರವಾಗಿ ಸ್ಥಳೀಯ ವೈದ್ಯಕೀಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕರೊನಾ ಗುಣಪಡಿಸುತ್ತೇನೆ ಎನ್ನುತ್ತಿದ್ದ ಕರೊನಾ ಬಾಬಾ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net