ಯುಟ್ಯೂಬರ್ ಎಲ್ವೀಶ್ ಯಾದವ್ ಮನೆ ಮೇಲೆ ಗುಂಡಿನ ದಾಳಿ ಕೇಸ್; ಇಬ್ಬರನ್ನು ಬಂಧಿಸಿದ ಪೊಲೀಸರು| Arrest

Elvish yadav shoot
Published on

Arrest: ಗುರುಗ್ರಾಮದ ಸೆಕ್ಟರ್ 57 ರಲ್ಲಿರುವ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ನಿವಾಸದ ಮೇಲೆ ಆಗಸ್ಟ್ 17ರಂದು ಗುಂಡಿನ ದಾಳಿ ನಡೆಸಿದ್ದ ಇಬ್ಬರು ಶೂಟರ್‌ಗಳನ್ನು ದೆಹಲಿ ದೆಹಲಿ ಪೊಲೀಸರು ಸೋಮವಾರ (ಆಗಸ್ಟ್ 25) ಬಂಧಿಸಿದ್ದಾರೆ.

ಬಂಧಿತ ಶೂಟರ್‌ಗಳನ್ನು ಗೌರವ್ ಮತ್ತು ಆದಿತ್ಯ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಕುಖ್ಯಾತ ಹಿಮಾಂಶು ಭಾವ್ ಗ್ಯಾಂಗ್‌ಗೆ ಸಂಬಂಧಿಸಿದವರಾಗಿದ್ದಾರೆ ಎನ್ನಲಾಗಿದೆ. ಶಾಹಬಾದ್ ಡೈರಿಯ ಪ್ರದೇಶದಲ್ಲಿ ಖಚಿತ ಮಾಹಿತಿ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಆಗಸ್ಟ್ 17 ರಂದು ಬೆಳಿಗ್ಗೆ 5:30 ರ ಸುಮಾರಿಗೆ ಮೂವರು ಮುಖವಾಡ ಧರಿಸಿದ ಶೂಟರ್​ಗಳು ಬೈಕ್‌ನಲ್ಲಿ ಆಗಮಿಸಿ ಎಲ್ವಿಶ್ ಯಾದವ್ ಮೇಲೆ  ಎರಡು ಡಜನ್‌ಗಿಂತಲೂ ಹೆಚ್ಚು ಗುಂಡುಗಳನ್ನು ಹಾರಿಸಿದ್ದರು. ಎಲ್ವಿಶ್ ಯಾದವ್ ಆ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ, ಕುಟುಂಬದ ಕೆಲವು ಸದಸ್ಯರು ಒಳಗಿದ್ದರು. ಯಾವುದೇ ಗಾಯಗಳಾಗಿರಲಿಲ್ಲ. ಭಾವ್ ಗ್ಯಾಂಗ್ ಈ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ಎಲ್ವಿಶ್ ಯಾದವ್ ಕಾನೂನುಬಾಹಿರ ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಇದಕ್ಕೂ ಮೊದಲು ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್-ಟ್ಯಾಕ್ಸಿ ಸೇವೆಯ ಚಾಲಕ ಜತಿನ್ (24) ಎಂಬಾತನನ್ನು ಫರಿದಾಬಾದ್‌ನ ಪರ್ವತೀಯ ಕಾಲೋನಿಯಿಂದ ಬಂಧಿಸಿದ್ದರು. ಜತಿನ್ ಈ ದಾಳಿಯನ್ನು ಯೋಜಿಸಿದ್ದ ಮತ್ತು ಗುಂಡಿನ ದಾಳಿಯನ್ನು ಕಾರ್ಯಗತಗೊಳಿಸಲು ಬೈಕ್ ಒದಗಿಸಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಆಗಸ್ಟ್ 22 ರಂದು ಫರಿದಾಬಾದ್ ಪೊಲೀಸರು ಇಶಾಂತ್ ಗಾಂಧಿ ಎಂಬಾತನನ್ನು ಎನ್‌ಕೌಂಟರ್​ನಲ್ಲಿ ಆತನಿಗೆ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.

ಗುರುಗ್ರಾಮ್ ಪೊಲೀಸರು ಘಟನೆಯ ಸ್ಥಳವನ್ನು ಪರಿಶೀಲಿಸಿದ್ದಾರೆ.ಮತ್ತು ಫೊರೆನ್ಸಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶವನ್ನು ಖಚಿತಪಡಿಸಲು ಮತ್ತು ಉಳಿದ ಆರೋಪಿಗಳನ್ನು ಬಂಧಿಸಲು ತನಿಖೆ ಮುಂದುವರಿದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net