'ಪೊಗರು' ಚಿತ್ರತಂಡದಿಂದ ಬಂತು ಇನ್ನೆರೆಡು ಟ್ರೈಲರ್​

Pogaru - Final
Published on

ಬೆಂಗಳೂರು: ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರವು ಜನವರಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ಕಳೆದ ತಿಂಗಳೇ ನಿರ್ದೇಶಕ ನಂದಕಿಶೋರ್ ಹೇಳಿಕೊಂಡಿದ್ದರು. ಆದರೆ, ಆ ನಂತರ ಏನು ಸುದ್ದಿ ಇಲ್ಲ. ಚಿತ್ರವು ಇದೇ ತಿಂಗಳು ಬಿಡುಗಡೆಯಾಗುತ್ತದೋ ಅಥವಾ ಸ್ವಲ್ಪ ಮುಂದಕ್ಕೆ ಹೋಗಿದೆಯೋ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇದೆ.

ಈ ಮಧ್ಯೆ, ಹೊಸ ವರ್ಷದ ಅಂಗವಾಗಿ ಚಿತ್ರತಂಡದಿಂದ ಎರಡು ಗಿಫ್ಟ್​ಗಳು ಸಿಕ್ಕಿದೆ. 'ಪೊಗರು' ಚಿತ್ರವು ತೆಲುಗು ಮತ್ತು ತಮಿಳಿನಲ್ಲಿ ಡಬ್​ ಆಗಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತಲ್ಲ? ಈಗ ಆ ಎರಡೂ ಭಾಷೆಗಳ ಡೈಲಾಗ್​ ಟ್ರೈಲರ್​ ಬಿಡುಗಡೆಯಾಗಿದೆ. ಇದನ್ನು ಸ್ವತಃ ಧ್ರುವ ಅವರೇ ತಮ್ಮ ಸೋಷಿಯಲ್​ ಮೀಡಿಯಾ ಅಕೌಂಟ್​ಗಳ ಮೂಲಕ ಬಿಡುಗಡೆ ಮಾಡಿದ್ದಾರೆ.

ಒಂದು ವರ್ಷದ ಹಿಂದೆ, ಕನ್ನಡದಲ್ಲಿ ಡೈಲಾಗ್​ ಟ್ರೈಲರ್​ ಬಿಡುಗಡೆಯಾಗಿತ್ತು. ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಸಂಭಾಷಣೆ ಹೇಳುವ ಶೈಲಿಯಿಂದ ಜನಪ್ರಿಯವಾಗಿರುವ ಧ್ರುವ, ಈ ಡೈಲಾಗ್​ ಟ್ರೈಲರ್​ನಿಂದ ಇನ್ನಷ್ಟು ಸುದ್ದಿ ಮಾಡಿದ್ದರು. ಇದೀಗ ಅದೇ ಟ್ರೈಲರ್​ ತೆಲುಗು ಮತ್ತು ತಮಿಳಿನಲ್ಲೂ ಡಬ್​ ಆಗಿ ಬಿಡುಗಡೆಯಾಗಿದೆ.

'ಪೊಗರು' ಚಿತ್ರವನ್ನು ನಂದಕಿಶೋರ್​ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆಯನ್ನು ರಚಿಸಿದ್ದಾರೆ. ಚಿತ್ರದಲ್ಲಿ ಧ್ರುವ ಜತೆಗೆ ರಶ್ಮಿಕಾ ಮಂದಣ್ಣ, ಚಿಕ್ಕಣ್ಣ, ಧನಂಜಯ್​, ರಾಘವೇಂದ್ರ ರಾಜಕುಮಾರ್​ ಸೇರಿದಂತೆ ಹಲವು ಜನಪ್ರಿಯ ನಟರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net