More

  ಗುಲಾಬಿ ಕಂಪಿನ ಕಾವ್ಯ ಗಾರುಡಿಗ ಗುಲ್ಜಾರ್

  ಪ್ರೀತಿ, ಪ್ರಣಯ, ಶೋಕ, ವಿರಹ, ಅಗಲಿಕೆ.. ಜೀವಮಾನದಲ್ಲಿ ವ್ಯಕ್ತಿಯೊಬ್ಬ ಎದುರಿಸುವ ಎಲ್ಲ ಬಗೆಯ ಭಾವತೀವ್ರತೆಗಳಿಗೆ ಅಕ್ಷರಗಳ ಮೂಲಕ ಜೀವತುಂಬಿದ ಹೃದಯವಂತ ಕವಿ ಗುಲ್ಜಾರ್ ಸಾಬ್ ಅವರ 89ನೇ ಜನ್ಮದಿನ ಇಂದು. ಸಹಸ್ರಾರು ಶಾಯರಿಗಳ ಮೂಲಕ, ಕವಿತೆಗಳ ಮೂಲಕ ಅಸಾಮಾನ್ಯ ಎತ್ತರಕ್ಕೇರಿದ ಬಾಲಿವುಡ್ ಅಕ್ಷರ ಸಂತನ ಸಾಧನೆಯ ನೋಟ ಇಲ್ಲಿದೆ.

  ಸಂಜೆಯಿಂದ ಯಾಕೋ | ಕಣ್ಣು ಮಂಜಾಗುತ್ತಿದೆ

  ನೀನಿಂದು ಜತೆಯಲ್ಲಿಲ್ಲ | ಎಂಬ ಕೊರಗು ಕಾಡುತ್ತಿದೆ

  savyasachiಜೀವನಚಕ್ರವೆನ್ನುವುದು ಮನುಷ್ಯನನ್ನು ಎಲ್ಲಿಂದ ಎಲ್ಲೆಲ್ಲಿಗೆ ಕೊಂಡೊಯ್ಯುವುದೆಂದು ಊಹಿಸುವುದೂ ಕಷ್ಟ. ಆದರೆ, ಜೀವಮಾನದಲ್ಲಿ ಓರ್ವ ಸಾಧಕನ ಪರಿಕ್ರಮಣ ಮನುಷ್ಯಮಾತ್ರನ ಗ್ರಹಿಕೆಗೆ ನಿಲುಕಲಾರಷ್ಟು ಅಗಾಧವಾಗಿರುತ್ತದೆ. ಬಾಲಿವುಡ್​ನ ಅಮರಕವಿ ಗುಲ್ಜಾರ್ ಸಾಬ್ ಜೀವನವೂ ಅಂಥದ್ದೇ ಒಂದು ನಿದರ್ಶನ.

  ಹಿಂದಿ-ಉರ್ದು ಕವಿ, ಕಾದಂಬರಿಕಾರ, ಗೀತರಚನೆಕಾರ, ಸಂಭಾಷಣೆಕಾರ, ನಾಟಕಕಾರ, ನಿರ್ವಪಕ, ನಿರ್ದೇಶಕ.. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟತೆ, ವಿಭಿನ್ನತೆಯಿಂದ ಹೆಸರುವಾಸಿಯಾದವರು ಗುಲ್ಜಾರ್. ಬಾಲಿವುಡ್​ನಲ್ಲಿ ನೂರಾರು ಅಮರಗೀತೆಗಳ ಹಿಂದಿನ ಕವಿಹೃದಯವಾಗಿ ಚಿರಪರಿಚಿತರು. ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ, ಗ್ರಾ್ಯಮ್ಮಿ, 21 ಫಿಲಂಫೇರ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಅವರ ಸಾಧನೆಗೆ ತಕ್ಕಂತೆ ಅಲಂಕರಿಸಿರುವ ಗರಿಗಳೂ ಹಲವು. ಒಟ್ಟಿನಲ್ಲಿ ಗುಲ್ಜಾರ್​ಗೆ ಗುಲ್ಜಾರ್ ಸಾಟಿ.

  ಸಂಪೂರ್ಣ ಸಿಂಗ್ ಕಾಲ್ರಾ ಎಂಬ ಹೆಸರಿಗೆ ಅಂಥ ಮಹತ್ವವೇನೂ ಇಲ್ಲ. ಕಾರಣ, ಅದು ಯಾರಿಗೂ ಪರಿಚಿತವಲ್ಲದ ಹೆಸರು. ಅದೇ ಗುಲ್ಜಾರ್ ಎಂದಾಗ ಹೃದಯಾಂತರಾಳದಲ್ಲಿ ಭಾವತರಂಗಗಳೇಳುತ್ತವೆ. 1934 ಆಗಸ್ಟ್ 18ರಂದು ಆಗಿನ ಅಖಂಡ ಭಾರತದ ಝೇಲಂ ಜಿಲ್ಲೆಯ (ಈಗ ಪಾಕಿಸ್ತಾನ) ದೀನ ಎಂಬ ಹಳ್ಳಿಯಲ್ಲಿ ಜನಿಸಿದ ಸಂಪೂರ್ಣ ಸಿಂಗ್ ದೇಶ ಸ್ವಾತಂತ್ರ್ಯ ಪಡೆದು ಭಾರತ- ಪಾಕಿಸ್ತಾನವೆಂದು ಇಬ್ಭಾಗವಾದಾಗ 13 ವರ್ಷದ ಬಾಲಕ. ತಂದೆ ಮಾಖನ್ ಸಿಂಗ್ ಸಣ್ಣ ಪ್ರಮಾಣದ ಉದ್ಯಮಿ. ತಾಯಿ ಚಿಕ್ಕ ವಯಸ್ಸಿನಲ್ಲೇ ಅಗಲಿದ ಮೇಲೆ ಬಂದ ಚಿಕ್ಕಮ್ಮನಿಗೆ ಮಲಮಗನ ಮೇಲೆ ಮಮಕಾರವೇನೂ ಇರಲಿಲ್ಲ. ದೇಶ ವಿಭಜನೆಗೊಂಡಾಗ ಹುಟ್ಟಿದ ನೆಲ, ನೆನಪುಗಳನ್ನು ತೊರೆದು ಕುಟುಂಬ ಸಮೇತ ಭಾರತಕ್ಕೆ ಬಂದ ಮೇಲೆ ಮೊದಲು ಅಮೃತಸರ ಬಳಿಕ ದೆಹಲಿಯಲ್ಲಿ ವಾಸ. ಜೀವನೋಪಾಯಕ್ಕೆ ಪೆಟ್ರೋಲ್ ಬಂಕ್​ನಲ್ಲಿ ಕೆಲಸ. ಮುಂಬೈಗೆ ಸ್ಥಳಾಂತರಗೊಂಡ ಮೇಲೆ ಕವಿ ಹೃದಯದ ಸಂಪೂರ್ಣ ಸಿಂಗ್ ಮಾಡಿದ್ದು ಕಾರು ಗ್ಯಾರೇಜಿನಲ್ಲಿ ಹಳೆ ಕಾರುಗಳಿಗೆ ಬಣ್ಣ ಬಳಿಯುವ ಕೆಲಸ. ಆದರೆ, ಗ್ಯಾರೇಜಿನಲ್ಲಿ ಗುಜರಿ ಕಾರುಗಳ ನಡುವೆಯೂ ಅವರ ಮನಸ್ಸು ಶಾಯರಿಗಳಲ್ಲಿ ಮುಳುಗಿರುತ್ತಿತ್ತು. ತಂದೆಗೆ ಮಗ ಕಥೆ-ಕವಿತೆ ಎಂದು ಕಾಲಹರಣ ಮಾಡುವುದು ಇಷ್ಟವಿರಲಿಲ್ಲ. ಹಾಗಾಗಿ ತಂದೆಯ ಕಣ್ತಪ್ಪಿಸಿ ಗುಲ್ಜಾರ್ ದೀನ್ವಿ ಎಂಬ ಗುಪ್ತನಾಮದಿಂದ ಬರೆಯಲಾರಂಭಿಸಿದ್ದರು. ಮುಂದೆ ಗುಲ್ಜಾರ್ ಎಂಬ ಹೆಸರೇ ಖಾಯಂ ಆಗಿಬಿಟ್ಟಿತು. ಮುಂಬೈನಲ್ಲಿ ಪುರೋಗಾಮಿ ಲೇಖಕರ ಒಕ್ಕೂಟದ ಸಭೆಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಳುತ್ತಿದ್ದ ಗುಲ್ಜಾರ್​ಗೆ

  1960ರ ದಶಕದ ಗೀತರಚನೆಕಾರ ಶೈಲೇಂದ್ರ ಪರಿಚಯವಾಗಿದ್ದರು. ಪ್ರಖ್ಯಾತ ದಿಗ್ಧರ್ಶಕ ಬಿಮಲ್ ರಾಯ್ ‘ಬಂಧಿನಿ’ ಚಿತ್ರ ನಿರ್ವಿುಸುತ್ತಿದ್ದ ಸಂದರ್ಭವದು. ಎಸ್​ಡಿ ಬರ್ಮನ್ ಸಂಗೀತ ಸಂಯೋಜನೆಯ ಆ ಚಿತ್ರಕ್ಕೆ ಶೈಲೇಂದ್ರ ಶಿಫಾರಸಿನಿಂದ ಒಂದು ಹಾಡು ಬರೆಯುವ ಅವಕಾಶ ಗುಲ್ಜಾರ್​ಗೆ ಸಿಕ್ಕಿತ್ತು. ಅವರ ಮೊದಲ ಗೀತೆ ‘ಮೋರ ಗೋರ ಅಂಗ್ ಲಾಯಿ ಲೇ, ಮೋಹೆ ಶ್ಯಾಮ್ ರಂಗ್ ದೀ ದೇ’ ಹಾಡು ಎಲ್ಲರಿಗೂ ಇಷ್ಟವಾಗಿತ್ತು. ಇಷ್ಟೊಂದು ಪ್ರತಿಭಾವಂತ ಯುವಕ ಕಾರು ಗ್ಯಾರೇಜಿನಲ್ಲಿ ಕೆಲಸ ಮಾಡುವುದು ಬಿಮಲ್ ರಾಯ್ಗೆ ಇಷ್ಟವಾಗಿರಲಿಲ್ಲ. ಹಾಗಾಗಿ ತಮ್ಮ ಸಹಾಯಕನನ್ನಾಗಿ ನೇಮಿಸಿಕೊಂಡರು.

  ಗುಲ್ಜಾರ್ ಪ್ರವರ್ಧಮಾನದಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ಬಿಮಲ್ ರಾಯ್ ಮತ್ತು ಹೃಷಿಕೇಷ್ ಮುಖರ್ಜಿ. ಗುಲ್ಜಾರ್ ಮೇಲೆ ಬಂಗಾಳಿ ಸಂಸ್ಕೃತಿ ಪ್ರಭಾವ ಬೀರುವುದಕ್ಕೂ ಅವರಿಬ್ಬರೇ ಕಾರಣ. ಬಂಗಾಳ ಮತ್ತು ಬಂಗಾಳಿಗಳ ಮೇಲಿನ ಪ್ರೀತಿಯಿಂದಲೇ ನಾನು ಬಂಗಾಳಿಯನ್ನೇ ಮದುವೆಯಾದೆ ಎಂದು ಅವರು ತಮಾಷೆ ಮಾಡುತ್ತಿದ್ದರು. 70ರ ದಶಕದ ಪ್ರಸಿದ್ಧ ನಟಿ ರಾಖಿ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಗುಲ್ಜಾರ್​ರನ್ನು ಮದುವೆಯಾಗಿದ್ದರು.

  ನಿನ್ನ ನೆನಪಲ್ಲಿ | ರಾತ್ರಿಯಿಡೀ ಜಾಗರಣೆಯೂ | ಸ್ವರ್ಗಸುಖ

  ನಿನ್ನ ಮಧುರ | ಪ್ರೀತಿಯಲ್ಲಿರುವ ನೆಮ್ಮದಿ | ನಿದ್ರೆಯಲ್ಲೆಲ್ಲಿದೆ?

  ಗುಲ್ಜಾರ್, ಬಿಮಲ್​ರಾಯ್ ಸಹಾಯಕರಾಗಿರುವಾಗಲೇ ಆ ಕಾಲದ ಪ್ರಖ್ಯಾತ ದುರಂತ ನಾಯಕಿ ಮೀನಾ ಕುಮಾರಿ ಅವರ ಪರಿಚಯವಾಗಿತ್ತು. ಗುಲ್ಜಾರ್ ಸಹಜ ಕವಿ. ಮೀನಾಕುಮಾರಿ ಕೂಡ ಕಾವ್ಯಪ್ರಿಯೆ. ಸ್ವತಃ ಕವಿತೆ, ಘಜಲ್​ಗಳನ್ನು ಬರೆಯುತ್ತಿದ್ದರು. ಬಿಮಲ್ ರಾಯ್ರ ‘ಬೆನಜೀರ್’ ಚಿತ್ರದ ಸಂದರ್ಭದಲ್ಲಿ ಇಬ್ಬರಿಗೂ ಆದ ಪರಿಚಯ ಸಾಕಷ್ಟು ಗಾಢವಾಗಿ ಬೆಳೆಯಿತು. ಮೀನಾಕುಮಾರಿ ಮನೆಯಲ್ಲಿ ಪರಸ್ಪರರ ಕವಿತೆಗಳನ್ನು ಹೇಳುತ್ತ – ಕೇಳುತ್ತ ಕುಳಿತರೆ ಇಬ್ಬರಿಗೂ ಹೊತ್ತು ಹೋಗಿದ್ದೇ ತಿಳಿಯುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಮೀನಾಕುಮಾರಿ ಮತ್ತು ಅವರ ಪತಿ ಕಮಲ್ ಆಮ್ರೋಹಿ ಸಂಬಂಧವೂ ಹಳಸಿತ್ತು. ಸ್ವತಃ ಪ್ರಸಿದ್ಧ ಕವಿಯಾಗಿದ್ದರೂ ಆಮ್ರೋಹಿ ತನ್ನ ಕವಿತೆಗಳನ್ನು ಕಡೆಗಣಿಸುತ್ತಾರೆ ಎಂಬುದು ಮೀನಾಕುಮಾರಿ ಬೇಸರಕ್ಕೆ ಕಾರಣವಾಗಿತ್ತು. ಗುಲ್ಜಾರ್ ಮತ್ತು ಮೀನಾ ಪರಸ್ಪರರ ಕಾವ್ಯ ತುಡಿತವನ್ನು ಗೌರವಿಸುತ್ತಿದ್ದರು. ಇದೇ ಆಪ್ತತೆಯಿಂದಲೇ ಗುಲ್ಜಾರ್ ಮೊದಲ ಬಾರಿ ನಿರ್ದೇಶಿಸಿದ ಚಿತ್ರ ’ಮೇರೆ ಅಪ್ನೆ’ಯಲ್ಲಿ ಮೀನಾಕುಮಾರಿ ನಾಯಕಿಯಾಗಿ ನಟಿಸಿದ್ದರು. ಆದರೆ, ಈ ಹೊತ್ತಿಗಾಗಲೇ ಮೀನಾ ಆರೋಗ್ಯ ಹದಗೆಟ್ಟಿತ್ತು. ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಅವರ ಮನೆಗೆ ಗುಲ್ಜಾರ್ ನಿತ್ಯ ತೆರಳಿ ಹೊತ್ತಿಗೆ ಸರಿಯಾಗಿ ಔಷಧ ಸೇವಿಸುವಂತೆ ನಿಗಾ ವಹಿಸುತ್ತಿದ್ದರು. ರಂಜಾನ್ ಕಾಲದಲ್ಲಿ ಉಪವಾಸ ಮಾಡಬೇಕು, ಔಷಧ ಬೇಡ ಎಂದು ಮೀನಾಕುಮಾರಿ ಹಟ ಮಾಡುತ್ತಿದ್ದರು. ಆಗ ಗುಲ್ಜಾರ್ ತಾವೇ ಮೀನಾಕುಮಾರಿ ಪರವಾಗಿ ರಂಜಾನ್ ಉಪವಾಸ ಮಾಡಿ ಆಕೆಗೆ ಔಷಧ ಕೊಡುತ್ತಿದ್ದರು. 1973ರಲ್ಲಿ ಮೀನಾಕುಮಾರಿ ಅಕಾಲಿಕ ಮರಣ ಹೊಂದಿದ ಬಳಿಕವೂ ಗುಲ್ಜಾರ್ ಅನೇಕ ವರ್ಷ ರಂಜಾನ್ ಉಪವಾಸ ಮಾಡುತ್ತಿದ್ದರಂತೆ. ಮೀನಾಕುಮಾರಿ ತಮ್ಮ ಕೊನೆಯ ದಿನಗಳಲ್ಲಿ ಖಾಸಗಿ ಡೈರಿಯೊಂದನ್ನು ಗುಲ್ಜಾರ್​ಗೆ ನೀಡಿದ್ದರು. ಅದರಲ್ಲಿ ಅವರು ಬರೆದ ಅನೇಕ ಕವಿತೆಗಳು ಮತ್ತು ಘಜಲ್​ಗಳಿದ್ದವು. ಮುಂದೆ ಗುಲ್ಜಾರ್ ಅವುಗಳನ್ನು ಮೀನಾಕುಮಾರಿ ಹೆಸರಲ್ಲಿ ಪ್ರಕಟಿಸಿದರು.

  ನೀನು ಸಿಕ್ಕಿದ ಮೇಲೆ | ಒಂದೊಂದು ಕ್ಷಣವನ್ನೂ

  ನಿನ್ನ ಜೊತೆಯಲ್ಲೇ | ಕಳೆದಿರುವೆ ನಲ್ಲೆ..

  ಮೀನಾಕುಮಾರಿ ಮರಣದ ನಂತರ ಗುಲ್ಜಾರ್ ಪ್ರಸಿದ್ಧ ನಟಿ ರಾಖಿ ಅವರನ್ನು ವಿವಾಹವಾದರು. ಮಗಳು ಮೇಘನಾ ಜನಿಸಿದ ಕೆಲಸಮಯದ ಬಳಿಕ ಇಬ್ಬರೂ ಪ್ರತ್ಯೇಕಗೊಂಡರು. ಆದರೆ, ವಿಚ್ಛೇದನ ಪಡೆಯಲಿಲ್ಲ. ನಟನೆ ಮುಂದುವರಿಸುವ ಸಲುವಾಗಿ ಗುಲ್ಜಾರ್​ರಿಂದ ದೂರ ಸರಿದ ರಾಖಿ, 1976ರಲ್ಲಿ ಯಶ್ ಚೋಪ್ರಾ ಮೇರು ಚಿತ್ರ ’ಕಭಿ ಕಭೀ’ ಚಿತ್ರದ ನಾಯಕಿಯಾದ ಬಳಿಕ ಗುಲ್ಜಾರ್ ಜೀವನಕ್ಕೆ ಮರಳಲಿಲ್ಲ. ಆದರೆ, ಇಬ್ಬರೂ ತಮ್ಮ ವೈಯಕ್ತಿಕ ಜೀವನ ಗಾಸಿಪ್​ಗಳಿಗೆ ಆಹಾರವಾಗಲು ಅವಕಾಶ ಕೊಡದೆ ಘನತೆ ಕಾಪಾಡಿಕೊಂಡರು.

  ತೆರೆದ ಪುಸ್ತಕದ ಹಾಳೆಗಳು | ಪಟಪಟ ಮಗುಚುತ್ತಿರುತ್ತವೆ

  ಗಾಳಿ ಇರಲಿ ಇಲ್ಲದಿರಲಿ | ದಿನಗಳು ಉರುಳುತ್ತಿರುತ್ತವೆ

  ಎಲ್ಲರ ಪ್ರೀತಿಯ ಗುಲ್ಜಾರ್ ಸಾಬ್​ರ ಕವಿತೆಗಳಿಗೆ ಮಾಂತ್ರಿಕ ಶಕ್ತಿ. ಬಾಲಿವುಡ್​ನಲ್ಲಿ ಅವರು ಬರೆದ ಗೀತೆಗಳು ಸತ್ವದಿಂದ, ಕಾವ್ಯಾತ್ಮಕತೆಯಿಂದ, ತಾತ್ವಿಕ ಹಿರಿಮೆಯಿಂದ ಅಮರತ್ವ ಪಡೆದಂಥವು. ‘ಆನೇ ವಾಲಾ ಪಲ್ ಜಾನೆ ವಾಲಾ ಹೈ, ಹೋ ಸಕೇ ತೋ ಇಸ್ಮೆ ಜಿಂದಗಿ ಬಿತಾ ದೊ..’ 1978ರಲ್ಲಿ ಗೋಲ್‍ಮಾಲ್ ಚಿತ್ರಕ್ಕಾಗಿ ಬರೆದ ಈ ಹಾಡು ಬದುಕಿನ ನಶ್ವರತೆಯನ್ನು, ಕ್ಷಣಿಕ ಜೀವನದಲ್ಲಿ ಯಾವ ರೀತಿ ಬದುಕಬೇಕೆಂಬ ಜೀವನಪ್ರೀತಿಯನ್ನು ಕಟ್ಟಿಕೊಡುತ್ತದೆ. 1970ರಲ್ಲಿ ‘ಖಾಮೋಷಿ’ ಚಿತ್ರಕ್ಕಾಗಿ ಬರೆದ ‘ವೊ ಶಾಮ್ ಕುಚ್ ಅಜೀಬ್ ಥಿ’ ಹಾಡು, 1971ರಲ್ಲಿ ‘ಅನುಭವ್’ ಚಿತ್ರಕ್ಕಾಗಿ ಬರೆದ ದಂಪತಿಯ ಪಿಸುಮಾತಿನ ಸಖಿಗೀತೆ ‘ಮುಜೆ ಜಾನ್ ನ ಕಹೋ ಮೇರಿ ಜಾನ್’, ಅದೇ ವರ್ಷ ಪ್ರಸಿದ್ಧ ‘ಆನಂದ್’ ಚಿತ್ರಕ್ಕಾಗಿ ಬರೆದ ‘ಮೈನೆ ತೇರೆ ಲಿಯೆ ಹಿ ಸಾತ್ ರಂಗ್ ಕೆ ಸಪ್ನೆ ಚುನೆ’ ಮೊದಲಾದ ಹಾಡುಗಳು ಸರ್ವಕಾಲಕ್ಕೂ ಪ್ರಸ್ತುತ. ಜೀವನವೆಂಬ ಪಯಣದಲ್ಲಿ ನಾವೆಲ್ಲರೂ ಪಯಣಿಗರು, ರಸ್ತೆ ಸಾಗಿದಂತೆ, ಪ್ರಯಾಣವನ್ನು ಆಸ್ವಾದಿಸಬೇಕು ಎಂಬ ತಾತ್ವಿಕ ನೆಲೆಗಟ್ಟಿನಲ್ಲಿ ಬರೆದ ‘ಮುಸಾಫಿರ್ ಹ್ಞೂ ಯಾರೊ’ ಗೀತೆ 1972ರಲ್ಲಿ ತೆರೆಕಂಡ ‘ಪರಿಚಯ್’ ಚಿತ್ರಕ್ಕೆ ಹೊಸ ಆಯಾಮ ತಂದುಕೊಟ್ಟಿತ್ತು. ಗುಲ್ಜಾರ್ ಸ್ವತಃ ನಿರ್ದೇಶಿಸಿದ ’ಆಂಧಿ’ ಇಂದಿರಾ ಗಾಂಧಿ ಅವರ ಜೀವನಾಧಾರಿತ ಎಂಬ ಕಲ್ಪನೆಯಿಂದ ರಾಜಕೀಯ ಕಾರಣಗಳಿಗೆ ಸಮಸ್ಯೆಗಳನ್ನೆದುರಿಸಿದರೂ, ಪ್ರೇಕ್ಷಕರ ದೃಷ್ಟಿಯಿಂದ ಅದ್ಭುತ ಚಿತ್ರವಾಗಿತ್ತು. ಅದರಲ್ಲೂ ಗುಲ್ಜಾರ್ ಬರೆದ ವಿರಹಗೀತೆ ‘ತೇರೆ ಬಿನಾ ಜಿಂದಗಿ ಸೆ ಕೋಯಿ, ಶಿಖವಾ ತೋ ನಹಿ’ ಅದ್ಭುತ ಕಾವ್ಯವಾಗಿತ್ತು. ‘ನೀನು ಇಲ್ಲದ ಬದುಕಿನ ಬಗ್ಗೆ ನನ್ನ ಆಕ್ಷೇಪವೇನೂ ಇಲ್ಲ.. ಆದರೂ, ನೀನಿಲ್ಲದ ಬದುಕು, ಬದುಕೇ ಅಲ್ಲ..’ ಎಂಬರ್ಥದ ಈ ಹಾಡು ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಕಂಠದಲ್ಲಿ ಅಮರವಿರಹಗೀತೆಯಾಗುಳಿಯಿತು. ಅದೇ ಚಿತ್ರದ ‘ತುಮ್ ಆಗಯೇ ಹೋ, ನೂರ್ ಆಗಯಾ ಹೈ’ ಹಾಡು ಸಹ ಭಾವ ತರಂಗಗಳನ್ನು ಎಬ್ಬಿಸುವಷ್ಟು ಸತ್ವಪೂರ್ಣ. 1983ರಲ್ಲಿ ‘ಮಾಸೂಮ್ ಚಿತ್ರಕ್ಕಾಗಿ ಬರೆದ ‘ತುಜ್​ಸೆ ನಾರಾಜ್ ನಹಿ ಜಿಂದಗಿ’ ಗುಲ್ಜಾರ್ ಬರೆದ ಸಾರ್ವಕಾಲಿಕ ಶ್ರೇಷ್ಠ ತಾತ್ವಿಕ ಗೀತೆ ಎನ್ನಬಹುದು.

  1971ರಲ್ಲಿ ಬಿಡುಗಡೆಯಾದ, ಜಯಾ ಬಾಧುರಿ ವೃತ್ತಿಜೀವನದ ಶ್ರೇಷ್ಠ ಚಿತ್ರ ’ಗುಡ್ಡಿ’ ಸಲುವಾಗಿ ಗುಲ್ಜಾರ್ ಬರೆದ ಎರಡು ಹಾಡುಗಳು ಅತ್ಯಂತ ಜನಪ್ರಿಯ. ಅದರಲ್ಲೂ ’ಹಮ್ೊ ಮನ್ ಕಿ ಶಕ್ತಿ ದೇನಾ’ ಹಾಡನ್ನು ಈಗಲೂ ಉತ್ತರಭಾರತದ ಶಾಲೆಗಳಲ್ಲಿ ರಾಷ್ಟ್ರಗೀತೆಯ ಜತೆ ಹಾಡಲಾಗುತ್ತದೆ.

  ಗುಲ್ಜಾರ್ ಎಲ್ಲ ಕಾಲಕ್ಕೂ ಸಲ್ಲುವ ಕವಿ. 1960, 70, 80ರ ದಶಕದಲ್ಲಿ ಮಧುರ ಪ್ರೇಮ, ವಿರಹ ಗೀತೆಗಳನ್ನು ಬರೆದಷ್ಟೇ ಲೀಲಾಜಾಲವಾಗಿ ಆಧುನಿಕ ಟಪೋರಿ ಹಾಡು ಬರೆಯುವುದಕ್ಕೂ ಸೈ ಎಂದು ನಿರೂಪಿಸಿದವರು ಅವರು. ಅದಕ್ಕೊಂದು ಉದಾಹರಣೆ, 2006ರಲ್ಲಿ ‘ಓಂಕಾರ’ ಚಿತ್ರಕ್ಕೆ ಬರೆದ ‘ಬೀಡಿ ಜಲೈಲೆ’ ಐಟಂ ಹಾಡು. 1998ರಲ್ಲಿ ‘ದಿಲ್ ಸೆ’ ಚಿತ್ರಕ್ಕೆ ‘ಏ ಅಜನಬಿ, ತು ಭೀ ಕಭಿ’ ಹಾಡು, ‘ಸ್ಲಂ ಡಾಗ್ ಮಿಲಯನೇರ್’ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನೇ ಗೆದ್ದುಕೊಟ್ಟ ‘ಜೈ ಹೋ’ ಹಾಡುಗಳಿಗೆ ಅಮರ ಸಾಲು ಬರೆದವರು ಗುಲ್ಜಾರ್. ಅಷ್ಟೇ ಏಕೆ, ‘ಸಾಥಿಯಾ’ ಚಿತ್ರಕ್ಕಾಗಿ ‘ಓ ಹಮ್ ದಮ್ ಸುನಿಯೊ ರೆ’ ರ್ಯಾಪ್ ಹಾಡು, ‘ಬಂಟಿ ಔರ್ ಬಬ್ಲಿ’ ಚಿತ್ರದ ‘ಕಜ್ರಾ ರೇ’ ಪಾರ್ಟಿ ಹಾಡು, 1996ರಲ್ಲಿ ‘ಮಾಚಿಸ್’ ಚಿತ್ರಕ್ಕೆ ಬರೆದ ‘ಚಪ್ಪ ಚಪ್ಪ ಚರ್ಖಾ ಚಲೆ’ ಹಾಡುಗಳ ವೈವಿಧ್ಯ ಅಸದೃಶ.

  ಪ್ರೀತಿ, ಪ್ರಣಯ, ಶೋಕ, ವಿರಹ, ಅಗಲಿಕೆ.. ಜೀವಮಾನದಲ್ಲಿ ವ್ಯಕ್ತಿಯೊಬ್ಬ ಎದುರಿಸುವ ಎಲ್ಲ ಬಗೆಯ ಭಾವತೀವ್ರತೆಗಳಿಗೆ ಅಕ್ಷರಗಳ ಮೂಲಕ ಜೀವತುಂಬಿದ ಹೃದಯವಂತ ಕವಿ ಗುಲ್ಜಾರ್ ಸಾಬ್ ಅವರ 89ನೇ ಜನ್ಮದಿನ ಇಂದು. ‘ನೀನೊಬ್ಬ ಶಾಯರ್ ಅಲ್ಲದೇ ಹೋಗಿದ್ದರೆ ಸಾಮಾನ್ಯ ವ್ಯಕ್ತಿಯಾಗಿರುತ್ತಿದ್ದೆ’ ಎಂದು ಪತ್ನಿ ರಾಖಿ ಒಮ್ಮೆ ಹೇಳಿದ್ದರಂತೆ. ಬದುಕಿನ ಹಾದಿಗೆ ಬೆಳಕಿನ ದೀವಟಿಗೆಯಾಗುವಂಥ ಸಹಸ್ರಾರು ಶಾಯರಿಗಳ ಮೂಲಕ, ಕವಿತೆಗಳ ಮೂಲಕ ಅಸಾಮಾನ್ಯ ಎತ್ತರಕ್ಕೇರಿದ ಗುಲ್ಜಾರ್ ಸಾಬ್​ಗೆ ಜನ್ಮದಿನದ ಶುಭಾಶಯಗಳು..

  ತೋಡಾ ಹೈ; ತೋಡೇ ಕಿ ಜರೂರತ್ ಹೈ

  ಜಿಂದಗಿ ಫಿರ್ ಭಿ ಯಹಾ ಖೂಬ್​ಸೂರತ್ ಹೈ

  (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts