

ಮಂಜೇಶ್ವರ: ಭಾಷೆ, ಗಡಿಗಳನ್ನು ದಾಟಿ ಸಾಹಿತ್ಯ-ಸಂಸ್ಕೃತಿಗಳು ಮೇಳೈಸಿದಾಗ ಸುಶಿಕ್ಷಿತ ವ್ಯವಸ್ಥೆಯೊಂದು ಹುಟ್ಟಿಕೊಳ್ಳುತ್ತದೆ. ಒಡೆದು ಬಡಿದಾಡುವ ವ್ಯವಸ್ಥೆಗೆ ಅಕ್ಷರ ರೂಪದಲ್ಲಿ ಬರೆದು ಬೆಸೆಯುವ ಸಂಸ್ಕೃತಿಯೊಂದು ಈ ಮೂಲಕ ರೂಪುಗೊಂಡಾಗ ಮಾನವರಾಗಲು ಸಾಧ್ಯ. ಕಾವ್ಯ ಸಂಸ್ಕೃತಿಯಾನ ಕಾರ್ಯಕ್ರಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನಿವಾಸದಲ್ಲಿ ಆಯೋಜಿಸಿದ್ದು, ಸಕಾಲಿಕವಾಗಿ ಸಾಹಿತ್ಯ ಚರಿತ್ರೆಗೆ ಹೊಸ ಭಾಷ್ಯ ಬರೆದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದ ರಾಜ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ರಂಗಮಂಡಲ ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ಭಾನುವಾರ ಗಿಳಿವಿಂಡು ಆವರಣದಲ್ಲಿ ಕಾವ್ಯ ಸಂಸ್ಕೃತಿ ಯಾನ 11ನೇ ಕವಿಗೋಷ್ಠಿ ಸಮಾರಂಭದ ಸಮಾರೋಪದಲ್ಲಿ ಮಾತನಾಡಿದರು.
ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಗೌರವ ಉಪಸ್ಥಿತರಿದ್ದರು. ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲವೀನ ಮೊಂತೇರೊ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶಿವಶಂಕರ್, ಗೋವಿಂದ ಪೈ ಸ್ಮಾರಕ ಸಮಿತಿ ಸದಸ್ಯ ವಾಸುದೇವ, ಯಕ್ಷಗಾನ ಕಲಾವಿದ ನರಸಿಂಹ ಬಲ್ಲಾಳ್, ಡಾ.ಎಚ್.ಆರ್.ಸ್ವಾಮಿ, ಡಾ.ಪದ್ಮಾ ಶೈಲೇಂದ್ರ ಬಂದಗದ್ದೆ, ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಮೇಶ ಎಂ.ಸಾಲ್ಯಾನ್ ಇದ್ದರು.
ಕಮಲಾಕ್ಷ ಡಿ.ಸ್ವಾಗತಿಸಿದರು. ಸಂತೋಷ್ ಕುಮಾರ್ ಕೆ.ನಿರೂಪಿಸಿದರು. ಕಮಲಾಕ್ಷ ಕನಿಲ ವಂದಿಸಿದರು.