

ಕಾರವಾರ: POCSO ಅಂಗವಿಕಲ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ದುರುಳನಿಗೆ ಜಿಲ್ಲಾ ವಿಶೇಷ ಮಕ್ಕಳ ಸ್ನೇಹಿ ನ್ಯಾಯಾಲಯ ತಲಾ 20 ವರ್ಷ ಜೈಲು ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ ದಾಂಡೇಲಿಯ ಬೋನವೆಂಚರ್ ಡುಮಂಗ್ ಫರ್ನಾಂಡಿಸ್ ಶಿಕ್ಷೆಗೊಳಗಾದ ವ್ಯಕ್ತಿ. ಆತ ಅಪ್ರಾಪ್ತ ಅಂಗವಿಕಲ ಬಾಲಕಿಯನ್ನು ಮದುವೆಯಾಗುವುದುದಾಗಿ ಪುಸಲಾಯಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ಖಾಸಗಿ ಫೋಟೋ ತೆಗೆದುಕೊಂಡು ಅದನ್ನು ತನ್ನ ಸ್ನೇಹಿತನಿಗೆ ಕಳಿಸಿ, ಬಾಲಕಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. 2021 ರಲ್ಲಿ ಪ್ರಕರಣ ನಡೆದಿತ್ತು. ದಾಂಡೇಲಿ ಶಹರ ಠಾಣೆ ಪೊಲೀಸರು POCSO ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಜಿಲ್ಲಾ ವಿಶೇಷ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರತಿಭಾ ಬಂಡುರಾವ ಕುಲಕರ್ಣಿ ಅವರು 17 ಸಾಕ್ಷಿಗಳನ್ನು ವಿಚಾರಿಸಿದ್ದರು. 38 ದಾಖಲೆಗಳನ್ನು ಪರಿಶೀಲಿಸಿ ಬೋನವೆಂಚರ್ ಅಪರಾಧ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ 20 ವರ್ಷ ಶಿಕ್ಷೆ ಪ್ರಕಟಿಸಿದ್ದಾರೆ. ಒಟ್ಟು 1.5 ಲಕ್ಷ ರೂ. ದಂಡ ವಿಧಿಸಿದ್ದು, ದಂಡದ ಹಣವನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ. ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕಿ ಶುಭಾ ಗಾಂವಕರ್ ಹಾಗೂ ಪ್ರಧಾನ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಅವರು ವಾದ ಮಂಡಿಸಿದ್ದರು.