

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ವಿದೇಶಕ್ಕೆ ಪರಾರಿಯಾಗುವ ಮಧ್ಯೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಕಲ್ಲೂರಾವಿ ನಿವಾಸಿ, ಗಲ್ಫ್ ಉದ್ಯೋಗಿ 44ರ ಹರೆಯದ ವ್ಯಕ್ತಿ ಬಂಧಿತ. ಒಂದು ತಿಂಗಳ ಹಿಂದೆ ವಿದೇಶದಿಂದ ಊರಿಗೆ ಆಗಮಿಸಿದ್ದ ಈತ, ತನ್ನ ಮನೆಗೆ ಮಲಗಲು ಬರುತ್ತಿದ್ದ 16ರ ಹರೆಯದ ಬಾಲಕಿಗೆ ರಾತ್ರಿ ಹೊತ್ತು ಕೊಠಡಿಗೆ ತೆರಳಿ ಕಿರುಕುಳ ನೀಡುತ್ತಿದ್ದ. ಇದರಿಂದ ಖಿನ್ನತೆಗೊಳಗಾಗಿದ್ದ ಬಾಲಕಿ ಶಾಲೆಗೆ ತೆರಳುವುದಕ್ಕೂ ಹಿಂದೇಟು ಹಾಕುತ್ತಿದ್ದಳು. ನಿರಂತರ ರಜೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಶಾಲಾ ಅಧಿಕಾರಿಗಳು ವಿಚಾರಿಸಿದಾಗ ಅಸೌಖ್ಯದ ಕಾರಣ ನೀಡಿದ್ದಳು. ಸೋಮವಾರ ಒತ್ತಾಯಪೂರ್ವಕವಾಗಿ ಬಾಲಕಿಯನ್ನು ಶಾಲೆಗೆ ಕರೆಸಿ, ಕೌನ್ಸೆಲಿಂಗ್ಗೆ ಒಳಪಡಿಸಿದಾಗ ವಿಷಯ ಬಹಿರಂಗಗೊಂಡಿದೆ. ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ.