ಅ.2ರಂದು ಗಾಂಧಿ ಪ್ರತಿಮೆ ಅನಾವರಣ

Sul_Gandhi
Published on

ಸುಳ್ಯ: ಗಾಂಧಿ ಜಯಂತಿ ದಿನವಾದ ಅ.2ರಂದು ಸುಳ್ಯದಲ್ಲಿ ಗಾಂಧಿ ಚಿಂತನ ವೇದಿಕೆ ಮತ್ತು ನಪಂ ಸಹಯೋಗದಲ್ಲಿ ನಡೆಯುವ ಗಾಂಧಿ ನಡಿಗೆ ಮತ್ತು ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಪಂನ ಶಾಸಕ ಕಚೇರಿಯಲ್ಲಿ ತಾಪಂ ಇಒ ರಾಜಣ್ಣ, ತಹಸೀಲ್ದಾರ್ ಎಂ.ಮಂಜುನಾಥ್ ಹಾಗೂ ನಪಂ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್.ಅವರೊಂದಿಗೆ ಚರ್ಚಿಸಿದ ಅವರು, ಸುಳ್ಯ ನಗರ ವ್ಯಾಪ್ತಿಯ ಎಲ್ಲ ಪ್ರೌಢಶಾಲೆ ಜೂನಿಯರ್ ಕಾಲೇಜು ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಭಾಗವಹಿಸುವಂತೆ ವ್ಯವಸ್ಥೆಗೊಳಿಸಿ, ನಗರ ವ್ಯಾಪ್ತಿಯ ಗಾಂಧಿ ಜಯಂತಿ ಕಾರ್ಯಕ್ರಮ ಗಾಂಧಿನಗರದಲ್ಲಿ ಆಚರಿಸುವಂತೆ ಮಾಡಿ ಎಂದು ಸೂಚನೆ ನೀಡಿದರು.

ಬೆಳಗ್ಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ 9.45ಕ್ಕೆ ಜ್ಯೋತಿ ಸರ್ಕಲ್‌ನಲ್ಲಿ ಸೇರುವುದು ಮತ್ತು 10ಕ್ಕೆ ಸರಿಯಾಗಿ ಜ್ಯೋತಿ ಸರ್ಕಲ್‌ನಿಂದ ಗಾಂಧಿನಗರದ ಕಡೆ ಗಾಂಧಿ ನಡಿಗೆ ಆರಂಭಿಸುವುದು, ಗಾಂಧಿನಗರದ ಪಾರ್ಕ್ ಬಳಿ ಕಾರ್ಯಕ್ರಮ ಆಯೋಜಿಸುವುದೆಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಗಾಂಧಿ ಚಿಂತನ ವೇದಿಕೆ ಸಂಚಾಲಕ ಹರೀಶ್ ಬಂಟ್ವಾಳ್, ಪ್ರಮುಖರಾದ ಹರೀಶ್ ಕಂಜಿಪಿಲಿ, ಸಂತೋಷ್ ಜಾಕೆ, ಗೋವಿಂದ ಅಳವುಪಾರೆ, ದಿನೇಶ್ ಹೆಗ್ಡೆ, ಸುನಿಲ್ ಕೇರ್ಪಳ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net