ಬಂಡೀಪುರದಲ್ಲಿ ಮೋದಿ ಸಫಾರಿ: ಹುಲಿ ರಕ್ಷಿತಾರಣ್ಯದಲ್ಲಿ ಪ್ರಧಾನಿ ಪ್ರವಾಸ; ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ

Modi (4)
ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರು ನಗರಕ್ಕೆ ಶನಿವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತ ವತಿಯಿಂದ ಸ್ವಾಗತ ಕೋರಲಾಯಿತು. ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಕೇಂದ್ರ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಧರಿ ಇದ್ದರು.
Published on

| ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ

‘ವ್ಯಾಘ್ರಗಳ ನೆಲೆ’ಯಾಗಿರುವ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಏ.9ರಂದು ಪ್ರಧಾನಮಂತ್ರಿ ನರೇಂದ್ರಮೋದಿ ಭೇಟಿ ನೀಡಲಿದ್ದಾರೆ.

ಬಂಡೀಪುರದಲ್ಲಿ ಹುಲಿ ಯೋಜನೆ ಘೋಷಣೆಯಾಗಿ 50 ವರ್ಷ ಪೂರ್ಣಗೊಂಡಿದೆ. 1973ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಹುಲಿ ಯೋಜನೆ ಘೋಷಣೆ ಮಾಡಿದ್ದರು ಎನ್ನುವುದು ಇತಿಹಾಸ. ಈಗ ಪಿಎಂ ಮೋದಿ ಹೊಸ ದಾಖಲೆ ಬರೆಯುತ್ತಿದ್ದು, ಬಂಡೀಪುರಕ್ಕೆ ಆಗಮಿಸಿದ ಮೊದಲ ಪ್ರಧಾನಿಯಾಗಲಿದ್ದಾರೆ.

ವೇಳಾಪಟ್ಟಿ ಹೀಗಿದೆ: ಪಿಎಂ ಮೋದಿ ಏ.9ರಂದು ಬೆಳಗ್ಗೆ 7 ಗಂಟೆಗೆ ಬಂಡೀಪುರಕ್ಕೆ ಹೆಲಿಕಾಪ್ಟರ್​ನಲ್ಲಿ ಮೇಲುಕಾಮನಹಳ್ಳಿಯ ಹೆಲಿಪ್ಯಾಡ್​ಗೆ ಆಗಮಿಸಲಿದ್ದಾರೆ. ಇಲ್ಲಿಂದ ಭದ್ರತಾ ಕಾರಿನಲ್ಲಿ ಬಂಡೀಪುರ ಕ್ಯಾಂಪಸ್​ಗೆ ತೆರಳಲಿದ್ದಾರೆ. ಬಳಿಕ ಸುಮಾರು 2 ಗಂಟೆ ಕಾಲ ಸಫಾರಿಗೆ ಹೋಗಲಿದ್ದಾರೆ. ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಯೊಂದಿಗೆ ಟೀ ಸೇವನೆ ಮಾಡಲಿದ್ದಾರೆ. ನಂತರ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಲಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯತ್ರದ ಪಾತ್ರಧಾರಿಗಳಾದ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಸನ್ಮಾನಿಸುವರು. ತೆಪ್ಪಕಾಡಿನಲ್ಲಿ ದೇಶದ 12 ಹುಲಿಸಂರಕ್ಷಿತ ಪ್ರದೇಶದ ಹುಲಿ ಯೋಜನೆ ನಿರ್ದೇಶಕರೊಡನೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅರಣ್ಯ ಇಲಾಖೆ ಬುಧವಾರದಿಂದ ಭಾನುವಾರದವರೆಗೆ ಸುತ್ತಮುತ್ತಲಿನ ರೆಸಾರ್ಟುಗಳು, ಹೋಂಸ್ಟೇಗಳು, ಸಫಾರಿ ಹಾಗೂ ಬಂಡೀಪುರದ ಅತಿಥಿಗೃಹಗಳನ್ನು ಬಂದ್ ಮಾಡಿಸಿದೆ. ಅಲ್ಲದೆ ಪಟ್ಟಣ ಸೇರಿ ತಾಲೂಕಿನ ಬೇಗೂರು ಗ್ರಾಮದಲ್ಲಿರುವ ಎಲ್ಲ ವಸತಿಗೃಹಗಳನ್ನು ಬಂದ್ ಮಾಡಲಾಗಿದೆ. ಮೋದಿ ಭೇಟಿ ಸಂದರ್ಭದಲ್ಲಿ ಯಾವುದೇ ರೀತಿಯ ಭದ್ರತಾ ಲೋಪ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಎಸ್​ಪಿಜಿ ಕಮಾಂಡೋ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ವಿಶೇಷ ಸೂಚನೆ ನೀಡಿದರು.

ಹುಲಿ ಯೋಜನೆ ಸುವರ್ಣ ಮಹೋತ್ಸವಕ್ಕೆ ಬಂಡೀಪುರಕ್ಕೆ ಸ್ವತಃ ಪ್ರಧಾನಿಯವರೇ ಬರ್ತಿರೋದು ಖುಷಿಯಾಗಿದೆ. ದೇಶದಲ್ಲಿ 53 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಇವುಗಳಲ್ಲಿ ಪ್ರಧಾನಿ ಬಂಡೀಪುರವನ್ನೇ ಆಯ್ಕೆ ಮಾಡಿಕೊಂಡು ಆಗಮಿಸುತ್ತಿರುವುದು ಹೆಮ್ಮೆಯ ವಿಷಯ. | ರಮೇಶ್​ಕುಮಾರ್ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ

ಸಾರ್ವಜನಿಕರಿಗೆ ನಿರ್ಬಂಧ: ಪ್ರಧಾನಿ ಭೇಟಿ ಹಿನ್ನೆಲೆ ಬುಧವಾರವೇ ಎಸ್​ಪಿಜಿ ಸಿಬ್ಬಂದಿ ತಂಡ ಬಂಡೀಪುರಕ್ಕೆ ಆಗಮಿಸಿದ್ದು. ಹೆಲಿಪ್ಯಾಡ್ ಸುತ್ತಮುತ್ತ ಹಾಗೂ ಪ್ರಧಾನಿ ನರೇಂದ್ರ ಮೋದಿ ತೆರಳುವ ಅರಣ್ಯದ ಸಫಾರಿ ಮಾರ್ಗ ಹಾಗೂ ರಸ್ತೆಗಳ ಬದಿಗಳಲ್ಲಿ ಕಣ್ಗಾವಲು ಆರಂಭಿಸಿದ್ದಾರೆ. ತಾಲೂಕಿಗೆ ಈಗಾಗಲೆ ಕೇಂದ್ರ ವಿಶೇಷ ಭದ್ರತಾ ದಳ ಆಗಮಿಸಿ ಪರಿಶೀಲನೆ ನಡೆಸಿದ್ದರೂ ಮೈಸೂರಿನಿಂದ ಶ್ವಾನದಳ, ಬಾಂಬ್ ಪತ್ತೆ ದಳ ಮುಂತಾದ ನಾನಾ ಸಂಸ್ಥೆಗಳ ಸಿಬ್ಬಂದಿ ತುರುಸಿನ ತಪಾಸಣಾ ಕಾರ್ಯ ನಡೆಸಿದ್ದಾರೆ.

ಮೈಸೂರಿನಲ್ಲಿ ಪ್ರಧಾನಿ ಮೋದಿ ವಾಸ್ತವ್ಯ: ಪ್ರಧಾನಿ ನರೇಂದ್ರ ಮೋದಿ ಮೈಸೂರು, ಚಾಮರಾಜನಗರ ಹಾಗೂ ಮಧುಮಲೈನಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾನುವಾರ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಶನಿವಾರ ರಾತ್ರಿ ಆಗಮಿಸಿ ವಾಸ್ತವ್ಯ ಹೂಡಿದರು. ನಗರದ ಹೋಟೆಲ್ ರ್ಯಾಡಿಸನ್ ಬ್ಲೂ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸತ್ಕಾರ ದೊರೆಯಿತು. ಮೋದಿ ಬಳಸುವ ವಸ್ತುಗಳ ಮೇಲೆ ಅವರ ಫೋಟೊ ಚಿತ್ರಿಸಿ ಅಲಂಕಾರ ಮಾಡಲಾಗಿತ್ತು.

ಮೈಸೂರಲ್ಲಿ ಕಾರ್ಯಕ್ರಮ: 10.30ಕ್ಕೆ ಹುಣಸೂರು ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆಯ 50ನೇ ವರ್ಷಾಚರಣೆ ಹಾಗೂ ಪ್ರಥಮ ಸಂರಕ್ಷಣಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೆಲಿಪ್ಯಾಡ್ ಬಳಿ ವಾಮಾಚಾರ?: ನರೇಂದ್ರ ಮೋದಿ ಭಾನುವಾರ ಮಧುಮಲೈನಿಂದ ಹೆಲಿಕಾಪ್ಟರ್​ನಲ್ಲಿ ನಗರದ ಓವೆಲ್ ಮೈದಾನದಲ್ಲಿ ನಿರ್ವಿುಸಿರುವ ಹೆಲಿಪ್ಯಾಡ್​ಗೆ ಆಗಮಿಸಲಿದ್ದಾರೆ. ಈ ಹೆಲಿಪ್ಯಾಡ್ ಬಳಿಯ ರಸ್ತೆಯಲ್ಲಿ ಶನಿವಾರ ವಾಮಾಚಾರ ಮಾಡಲಾಗಿದೆ. ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ತೆಂಗಿನ ಕಾಯಿಯನ್ನು ಮಂತ್ರಿಸಿ ಅದಕ್ಕೆ ದಾರಸುತ್ತಿ ರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net