

ಮುಂಬೈ: 2024 ರ ಲೋಕಸಭಾ ಚುನಾವಣೆಯ ಮೊದಲ ಹಂತ ಮುಗಿದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಪ್ರತಿಕ್ರಿಯಿಸಿದ್ದು, ದೇಶಾದ್ಯಂತ ವಿವಿಧ ಬೂತ್‌ಗಳ ವಿಶ್ಲೇಷಣೆಯು "ಎನ್‌ಡಿಎಗೆ ಏಕಪಕ್ಷೀಯ ಮತದಾನ" ವಾಗಿದೆ ಎಂದು ಕಂಡುಬರುತ್ತಿದೆ ಎಂದು ಹೇಳಿದರು.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಮತದಾನ ಮಾಡಿದ ಎಲ್ಲರಿಗೂ ಮತ್ತು ವಿಶೇಷವಾಗಿ ಮೊದಲ ಬಾರಿಗೆ ಮತ ಚಲಾಯಿಸಿದ ಯುವಜನರಿಗೆ ನಾನು ಅಭಿನಂದಿಸುತ್ತೇನೆ. ಮತದಾನ ಮುಗಿದ ನಂತರ ಬೂತ್ ಮಟ್ಟದಲ್ಲಿ ನಡೆದ ವಿಶ್ಲೇಷಣೆ ಮತ್ತು ಬಂದ ಮಾಹಿತಿಯು ಮೊದಲ ಹಂತದಲ್ಲಿ ಎನ್‌ಡಿಎಗೆ ಏಕಪಕ್ಷೀಯ ಮತದಾನವಾಗಿದೆ ಎಂದು ಖಚಿತಪಡಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, INDIA ಕೂಟದ ಮುಖಂಡರು ಏನೇ ಹೇಳಿಕೊಂಡರೂ, ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಸೋಲನ್ನು ಒಪ್ಪಿಕೊಂಡಿದ್ದಾರೆ ಎಂಬುದು ಸತ್ಯ. ಇದೇ ಕಾರಣಕ್ಕೆ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲುತ್ತಿದ್ದ ಅವರ ಕೆಲವು ನಾಯಕರು ಈ ಬಾರಿ ರಾಜ್ಯಸಭೆ ಮಾರ್ಗದ ಮೂಲಕ ಪ್ರವೇಶಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡು ಮತ್ತು ಅಮೇಥಿಯಿಂದ ಸ್ಪರ್ಧಿಸುವ ಅವರ ನಿರ್ಧಾರ ಗೆಲ್ಲುವ ವಿಶ್ವಾಸ ಕಳೆದುಕೊಂಡಿರುವುದಾಗಿದೆ ಎಂದು ಹೇಳಿದರು.
ಶುಕ್ರವಾರ 102 ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡಾ 60 ರಷ್ಟು ಮತದಾರರು ಮತ ಚಲಾಯಿಸಿದ್ದರು.