

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಹತ್ವದ ಭೇಟಿಗೆ ಮುಹೂರ್ತ ಫಿಕ್ಸ್ ಆಗಿದೆ.
ಭಾರತ-ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಅವರು ಜುಲೈ 8 ರಿಂದ 10 ರವರೆಗೆ ರಷ್ಯಾ ಮತ್ತು ಆಸ್ಟ್ರಿಯಾಕ್ಕೆ ಅಧಿಕೃತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಜುಲೈ 8 ರಿಂದ 9ರವರೆಗೆ ರಷ್ಯಾಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. 5 ವರ್ಷಗಳ ಮೋದಿಯವರ ಮೊದಲ ರಷ್ಯಾ ಪ್ರವಾಸ ಇದಾಗಿದೆ. 2019ರಲ್ಲಿ ಅವರು ಇಲ್ಲಿನ ವ್ಲಾಡಿವೋಸ್ಟಾಕ್ನಲ್ಲಿ ನಡೆದ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಿದ್ದರು.
ಈ ಭೇಟಿ ಸಮಯದಲ್ಲಿ ರಕ್ಷಣೆ, ತೈಲ, ಅನಿಲ ಮತ್ತು ಇತರ ಭಾರತೀಯ ಕಾರ್ಯತಂತ್ರದ ಹಿತಾಸಕ್ತಿಗಳ ಕುರಿತು ಚರ್ಚೆಗಳನ್ನು ನಿರೀಕ್ಷಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪಿಎಂ ಮೋದಿ ಭಾಗಿ ನಂತರ ಮುಂದಿನ ರಷ್ಯಾ ಪ್ರವಾಸವು ಮಹತ್ವದ್ದಾಗಿದೆ. ಏಕೆಂದರೆ ಹೆಚ್ಚಿನ ಜಾಗತಿಕ ನಾಯಕತ್ವವು ಬದಲಾವಣೆ ಹಂತದಲ್ಲಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳುಗಳಿವೆ. ರಷ್ಯಾ ಪ್ರವಾಸ ಮುಗಿಸಿದ ನಂತರ ಮೋದಿ ಅವರು ಆಸ್ಟ್ರೀಯಾಕ್ಕೆ ಪ್ರಯಾಣಿಸಲಿದ್ದಾರೆ. 41 ವರ್ಷಗಳ ಬಳಿಕ ಆ ದೇಶ (ಆಸ್ಟ್ರೀಯಾ)ಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿ ಇದಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.