

ನವದೆಹಲಿ: ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿ 2004-2014ರಲ್ಲಿ ಹಗರಣಗಳೇ ತುಂಬಿದ್ದವು. ಆ 10 ವರ್ಷಗಳಲ್ಲಿ ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಇಂದು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ, ಅದಾನಿ ಗ್ರೂಪ್ನ ಷೇರು ಮಾರುಕಟ್ಟೆ ಕುಸಿತದ ಬಗ್ಗೆ ರಾಹುಲ್ ಗಾಂಧಿ ಮಾಡಿದ ಆರೋಪಗಳಿಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದರು.
ದೇಶದ ಅಭಿವೃದ್ಧಿ ವಿಚಾರದಲ್ಲಿ ಕೆಲವರಿಗೆ ನಿರಾಸೆ ಆಗಿದೆ. ದೇಶದ ಅಭಿವೃದ್ಧಿ ವಿಚಾರವೂ ಕೆಲವರಿಗೆ ಅಪಥ್ಯ. 140 ಕೋಟಿ ಜನರ ಶ್ರಮದ ಫಲವಾಗಿ ಭಾರತ ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದೆ. ಇದರಿಂದ ಹತಾಶೆರಾಗಿರುವ ಕೆಲವು ಜನರು ದೇಶದ ಪ್ರಗತಿಯನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅವರಿಗೆ ದೇಶದ ಜನರ ಸಾಧನೆ ಕಾಣಿಸುತ್ತಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತದ ಅಭಿವೃದ್ಧಿಯಲ್ಲಿ ಬೇರೆ ದೇಶಗಳು ಅಭಿವೃದ್ಧಿ ಕಾಣುತ್ತಿವೆ. ವಿಶ್ವದ ಬಗ್ಗೆ ಅಧ್ಯಯನ ಮಾಡುವವರಿಗೆ ದೇಶದ ಬಗ್ಗೆ ಆಶಾಭಾವ. ಇಂದು ದೇಶದಲ್ಲಿ ರಾಜಕೀಯ ಸುಸ್ಥಿರತೆ ಇದೆ ಎಂದು ಹೇಳಿದರು. ಯುಪಿಎ ಅವಧಿಯಲ್ಲಿ ಅರ್ಥವ್ಯವಸ್ಥೆ ಪಾತಾಳಕ್ಕೆ ಕುಸಿದಿತ್ತು. ಈಗ ಅರ್ಥ ವ್ಯವಸ್ಥೆ ಸರಿಯಾಗಿರುವುದು ಕೆಲವರ ನಿರಾಸೆಗೆ ಕಾರಣವಾಗಿದೆ. ಜಿ20 ಶೃಂಗಸಭೆ ಆತಿಥ್ಯ ಭಾರತಕ್ಕೆ ಸಿಕ್ಕಿರುವುದು ಕೆಲವರಿಗೆ ದುಃಖ ತಂದಿದೆ ಎಂದು ನರೇಂದ್ರ ಮೋದಿ ಹೇಳಿದರು. ಪ್ರಧಾನಿ ಭಾಷಣದ ವೇಳೆ ವಿಪಕ್ಷಗಳು ಸಭಾತ್ಯಾಗ ಮಾಡಿದ್ದಾರೆ.