ಮಿಸ್ಟರ್ ಮೋದಿಯವರೇ ಈ ರೀತಿ ಮಾಡಿದ್ರೆ ಬಡವರು ಏನು ಮಾಡ್ಬೇಕು? ಸಿಎಂ ಸಿದ್ದರಾಮಯ್ಯ ಪ್ರಶ್ನೆ

Siddaramaiah
Published on

ಬೆಂಗಳೂರು: ಮೋದಿ ಅವರು ಪ್ರಧಾನಿ ಆಗುವವರೆಗೂ ದೇಶದ ಸಾಲ 53 ಲಕ್ಷ ಕೋಟಿ ರೂಪಾಯಿ ಮಾತ್ರ ಇತ್ತು. ಆದರೆ ಈಗ ದೇಶದ ಸಾಲ 170 ಲಕ್ಷ ಕೋಟಿ ರೂ. ಆಗಿದೆ. ಪ್ರಧಾನಿ ಮೋದಿ ಅವಧಿಯಲ್ಲಿ 118 ಲಕ್ಷ ಕೋಟಿ ರೂ. ಸಾಲ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಸಾಲದ ಪ್ರಮಾಣವನ್ನು ಬಿಚ್ಚಿಟ್ಟರು.

ವಿಧಾನ ಪರಿಷತ್​ನಲ್ಲಿ 2023-24 ನೇ ಆಯವ್ಯಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಮೋದಿ ಪ್ರಧಾನಿ ಆಗುವವರೆಗೂ ದೇಶದ ಸಾಲ ಇದ್ದದ್ದು ಕೇವಲ 53 ಲಕ್ಷ ಕೋಟಿ ರೂಪಾಯಿ. ಆದರೆ, ಈ ಸಾಲವನ್ನು 170 ಲಕ್ಷ ಕೋಟಿ ರೂ.ಗೆ ಏರಿಸಿದ್ದೇ ಮೋದಿಯವರ ಸಾಧನೆ.

ಶ್ರೀಮಂತ ಕಾರ್ಪೋರೇಟರ್​ಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ ಅವರು ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುತ್ತಾರೆ. ಕಚ್ಚಾತೈಲದ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್-ಡೀಸೆಲ್ ಬೆಲೆ ಈ ಮಟ್ಟಕ್ಕೆ ಏರಿಸಿದ್ದಾರೆ. ಹಾಲು-ಮೊಸರು-ಮಜ್ಜಿಗೆ- ಮಂಡಕ್ಕಿ ಮೇಲೂ ಜಿಎಸ್​ಟಿ ಹಾಕಿದರೆ ಬಡವರು, ಮಧ್ಯಮವರ್ಗದವರ ಗತಿ ಏನು ಎಂದು ಪ್ರಶ್ನಿಸಿದರು.

ಟೆಕ್ನಿಕಲಿ ಅಲ್ಲಿದ್ದಾರೆ ಅಷ್ಟೆ 

ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಎದುರು ಸಾಲಿನಲ್ಲಿ ಜೆಡಿಎಸ್​ನ ಮರಿತಿಬ್ಬೇಗೌಡ ಮತ್ತು ಬಿಜೆಪಿಯ ಹೆಚ್.ವಿಶ್ವನಾಥ್ ಮಾತ್ರ ಕುಳಿತು ಉಳಿದವರೆಲ್ಲಾ ಬಹಿಷ್ಕರಿಸಿದ್ದರು. ಇದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಮರಿತಿಬ್ಬೇಗೌಡರು ಟೆಕ್ನಿಕಲಿ ಜೆಡಿಎಸ್​ನಲ್ಲಿದ್ದಾರೆ ಆದರೆ ವಾಸ್ತವವಾಗಿ ಅವರಿಗೆ ವಿರುದ್ಧವಿದ್ದಾರೆ. ಎಚ್. ವಿಶ್ವನಾಥ್ ಕೂಡ ಟೆಕ್ನಿಕಲಿ ಬಿಜೆಪಿಯಲ್ಲಿದ್ದಾರೆ. ಆದರೆ ಅವರು ಕೂಡ ವಾಸ್ತವವಾಗಿ ಬಿಜೆಪಿಗೆ ವಿರುದ್ಧವಿದ್ದಾರೆ ಎಂದು ಟೀಕಿಸಿದರು.

ಭಾಷಣದ ಹೈಲೈಟ್ಸ್

* ಮಹಾತ್ನಗಾಂಧಿ ಜೀವನ ಸಂದೇಶವೇ ಸತ್ಯ-ಅಹಿಂಸೆ ಆಗಿತ್ತು. ಸದಾ ಸುಳ್ಳು ಹೇಳುವ ಬಿಜೆಪಿಯವರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಕುಳಿತಿದ್ದಾರೆ.

*1949 ನವೆಂಬರ್ 25 ರಂದು ಅಂಬೇಡ್ಕರ್ ಅವರು ತಮ್ಮ ಐತಿಹಾಸಿಕ ಭಾಷಣದಲ್ಲಿ, "ನಮ್ಮ ಸಂವಿಧಾನ ಜನವರಿ 26 ರಿಂದ ಜಾರಿಗೆ ಬರುತ್ತದೆ. ಆದರೆ ಸಾಮಾಜಿಕ-ಆರ್ಥಿಕ‌ ಅಸಮಾನತೆ ದೇಶದಲ್ಲಿದೆ. ಈ ಅಸಮಾನತೆಯನ್ನು ಅಳಿಸದೇ ಹೋದರೆ ಜನರೇ ಈ ಸ್ವಾತಂತ್ರ್ಯ ಸೌಧವನ್ನು ಸುಟ್ಟು ಭಸ್ಮ ಮಾಡುತ್ತಾರೆ" ಎಂದಿದ್ದರು.‌ ಈ ಕಾರಣಕ್ಕೇ ಅಸಮಾನತೆ, ತಾರತಮ್ಯವನ್ನು ಅಳಿಸುವ ದೃಷ್ಟಿಯಿಂದ ಬಜೆಟ್​ನಲ್ಲಿ ಸರ್ವರಿಗೂ ಸಮಾನ ಅವಕಾಶ ಸಿಗುವ ಆಶಯದ ಕಾರ್ಯಕ್ರಮಗಳಿಗೆ ಮಹತ್ವ ನೀಡಿದ್ದೇನೆ.

* ಬಸವಣ್ಣನವರ ದಾಸೋಹ ಮತ್ತು ಕಾಯಕ ಸಂಸ್ಕೃತಿಯ ಆಶಯ ನಮ್ಮ ಆಯವ್ಯಯದಲ್ಲಿದೆ. ಬಿಜೆಪಿಯವರು ಬಸವ ವಿರೋಧಿಗಳು.

* ಬೆಂಕಿ ಹಚ್ಚುವುದೇ ಬಿಜೆಪಿ ಕೆಲಸ. ಅವರು ಮಣಿಪುರವನ್ನೂ ಬಿಡಲ್ಲ, ಕರ್ನಾಟಕವನ್ನೂ ಬಿಡಲ್ಲ. ಬೆಂಕಿ ಹಚ್ಚುತಾರೆ ಎಂದರು.

* ಶ್ರಮಿಕರ, ಬಡವರ ಹಣ ಕಿತ್ತು ಶ್ರೀಮಂತ ಕಾರ್ಪೋರೇಟ್ ಗಳಿಗೆ ಕೊಡುವುದು ಬಿಜೆಪಿಯ ಆರ್ಥಿಕತೆ. ಈ ಕಾರಣಕ್ಕೇ ಹಾಲು, ಮೊಸರು, ಮಂಡಕ್ಕಿ ಮೇಲೂ ತೆರಿಗೆ ಹಾಕಿದ್ದಾರೆ. ಶ್ರೀಮಂತ ಕಾರ್ಪೋರೇಟರ್​ಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, ರೈತರ ಸಾಲ ಮನ್ನಾ ಮಾಡಿ ಎಂದರೆ ಒಪ್ಪುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net