ವಿಶ್ವ ವಿಜೇತ ವೀರ ವನಿತೆಯರಿಗೆ ಪ್ರಧಾನಿ ಪ್ರಶಂಸೆ; ಮೋದಿಗೆ ಜೆರ್ಸಿ ಉಡುಗೊರೆ

web pm wcc
Published on

ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ಚಾಂಪಿಯನ್​ ಪಟ್ಟಕ್ಕೇರಿದ ಭಾರತ ತಂಡದ ಆಟಗಾರ್ತಿಯರು ಬುಧವಾರ ಪ್ರಧಾನಿ ನರೇಂದ್ರ ಮೊದಿ ಅವರನ್ನು ಲೋಕಕಲ್ಯಾಣ ಮಾರ್ಗದ ಅಧಿಕೃತ ನಿವಾಸದಲ್ಲಿ ಭೇಟಿಯಾದರು. ಈ ವೇಳೆ ಪ್ರಧಾನಿ ಮೋದಿ, ಅಮೋಘ ಗೆಲುವಿಗೆ ಮತ್ತು ಟೂರ್ನಿಯಲ್ಲಿ ಸತತ 3 ಸೋಲಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಎದುರಿಸಿದ ಟೀಕೆಗಳ ನಡುವೆಯೂ ಕಂಡ ಅದ್ಭುತ ಪುನರಾಗಮನಕ್ಕಾಗಿ ಹರ್ಮಾನ್​ಪ್ರೀತ್​ ಕೌರ್​ ಬಳಗವನ್ನು ಪ್ರಶಂಸಿಸಿ, ಅಭಿನಂದಿಸಿದರು.

ಪ್ರಧಾನಿ ಮೋದಿ ಜತೆಗೆ ಎಲ್ಲ 16 ಆಟಗಾರ್ತಿಯರು ಮತ್ತು ಮುಖ್ಯ ಕೋಚ್​ ಅಮೋಲ್​ ಮುಜುಮ್ದಾರ್​, ಬಿಸಿಸಿಐ ಅಧ್ಯಕ್ಷ ಮಿಥುನ್​ ಮನ್ಹಾಸ್​ ಟ್ರೋಫಿಯೊಂದಿಗೆ ಪೋಸ್​ ನೀಡಿದರು. ಈ ವೇಳೆ ಎಲ್ಲ ಆಟಗಾರ್ತಿಯರ ಸಹಿಯನ್ನು ಒಳಗೊಂಡ ತಂಡದ ನೀಲಿ ಜೆರ್ಸಿಯನ್ನೂ ಪ್ರಧಾನಿಗೆ ಉಡುಗೊರೆ ನೀಡಲಾಯಿತು. ಇದೇ ವೇಳೆ ಆಟಗಾರ್ತಿಯರು ಪ್ರಧಾನಿ ಸುತ್ತ ಕುರ್ಚಿಯಲ್ಲಿ ಕುಳಿತು ಸಂವಾದವನ್ನೂ ನಡೆಸಿದರು. ಇನ್ನಷ್ಟು ಕಠಿಣ ಪರಿಶ್ರಮ ಪಡಿ ಮತ್ತು ಎಲ್ಲ ಕನಸುಗಳನ್ನು ನನಸು ಮಾಡಿಕೊಳ್ಳಿ ಎಂದು ಪ್ರಧಾನಿ ಹಾರೈಸಿದರು. ಫಿಟ್​ ಇಂಡಿಯಾ ಅಭಿಯಾನದ ಸಂದೇಶವನ್ನು ದೇಶದೆಲ್ಲೆಡೆ, ಅದರಲ್ಲೂ ಪ್ರಮುಖವಾಗಿ ಬಾಲಕಿಯರಿಗೆ ತಲುಪಿಸುವಂತೆ ಪ್ರಧಾನಿ, ಆಟಗಾರ್ತಿಯರನ್ನು ಕೇಳಿಕೊಂಡರು.

2017ರ ಟ್ರೋಫಿ ಇಲ್ಲದ ಭೇಟಿ ನೆನಪು!

2017ರ ವಿಶ್ವಕಪ್​ನಲ್ಲಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟ ಬಳಿಕ ಪ್ರಧಾನಿ ಮೋದಿ ಅವರನ್ನು ಟ್ರೋಫಿ ರಹಿತವಾಗಿ ಭೇಟಿಯಾಗಿದ್ದ ಕ್ಷಣವನ್ನು ನಾಯಕಿ ಹರ್ಮಾನ್​ಪ್ರೀತ್​ ಕೌರ್​ ಮೆಲುಕು ಹಾಕಿದರು. ಜತೆಗೆ ಮುಂದೆಯೂ ಇದೇ ರೀತಿ ಟ್ರೋಫಿಯೊಂದಿಗೆ ಆಗಾಗ ಪ್ರಧಾನಿಯನ್ನು ಭೇಟಿಯಾಗುವ ಅವಕಾಶ ಲಭಿಸಲಿ ಎಂದು ಆಶಿಸಿದರು. ಫೈನಲ್​ ಪಂದ್ಯದ ಗೆಲುವಿನ ಕ್ಯಾಚ್​ ಹಿಡಿದ ಕ್ಷಣದ ಬಗ್ಗೆಯೂ ಪ್ರಧಾನಿ ಚರ್ಚಿಸಿದಾಗ, ಆ ಚೆಂಡು ನನ್ನ ಬಳಿಕ ಬಂದಿದ್ದು ಅದೃಷ್ಟ ಎಂದು ಹರ್ಮಾನ್​ಪ್ರೀತ್​ ಹೇಳಿದರು. ಪಂದ್ಯದ ತಿರುವಿನ ಕ್ಯಾಚ್​ ಹಿಡಿದಿದ್ದ ಅಮನ್​ಜೋತ್​ ಕೌರ್​ಗೆ ಪ್ರಧಾನಿ, ಆ ಕ್ಯಾಚ್​ ಹಿಡಿದ ಬಳಿಕ ನಿಮಗೆ ಟ್ರೋಫಿ ಕಾಣಿಸಿರಬಹುದು ಎಂದು ಹೇಳಿ ನಕ್ಕರು.

ದೀಪ್ತಿಗೆ ಶ್ರೀರಾಮ, ಹನುಮನ ಬಲ

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ "ಜೈ ಶ್ರೀರಾಮ್​' ಎಂದು ಬರೆದುಕೊಂಡಿರುವೆ. ತೋಳಿನಲ್ಲಿ ಹನುಮಾನ್​ ಟ್ಯಾಟೂ ಹಾಕಿರುವೆ. ಇದು ನನಗೆ ಹೆಚ್ಚಿನ ಬಲ ನೀಡುತ್ತದೆ ಎಂದು ಆಲ್ರೌಂಡ್​ ನಿರ್ವಹಣೆ ತೋರಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದ ದೀಪ್ತಿ ಶರ್ಮ, ಪ್ರಧಾನಿ ಮೋದಿಗೆ ತಿಳಿಸಿದರು. ಮಧ್ಯಪ್ರದೇಶದ ಕ್ರಾಂತಿ ಗೌಡ್​, ನನ್ನ ಸಹೋದರ ನಿಮ್ಮ ದೊಡ್ಡ ಅಭಿಮಾನಿ ಎಂದು ತಿಳಿಸಿದರು.

ಗಾಲಿಕುರ್ಚಿಯಲ್ಲಿ ತೆರಳಿದ ಪ್ರತಿಕಾ

ಕೊನೇ ಲೀಗ್​ ಪಂದ್ಯದ ವೇಳೆ ಕಾಲಿನ ಗಾಯಕ್ಕೊಳಗಾಗಿ ವಿಶ್ವಕಪ್​ನಿಂದ ಹೊರಬಿದ್ದಿದ್ದ ಆರಂಭಿಕ ಬ್ಯಾಟುಗಾರ್ತಿ ಪ್ರತಿಕಾ ರಾವಲ್​, ಫೈನಲ್​ ಗೆಲುವಿನ ಬಳಿಕ ಗಾಲಿಕುರ್ಚಿಯಲ್ಲೇ ಬಂದು ಭಾರತ ತಂಡದ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ಭೇಟಿಗೂ ಅವರು ತಂಡದೊಂದಿಗೆ ಗಾಲಿಕುರ್ಚಿಯಲ್ಲೇ ತೆರಳಿದರು. ಟೂರ್ನಿಯಲ್ಲಿ ಭಾರತ ಪರ 2ನೇ ಸರ್ವಾಧಿಕ ರನ್​ (308) ಗಳಿಸಿದ ನಡುವೆಯೂ ಪ್ರತಿಕಾಗೆ ವಿಶ್ವಕಪ್​ ಗೆಲುವಿನ ಪದಕ ದೊರೆಯದಿದ್ದುದು ವಿಪರ್ಯಾಸ. ಫೈನಲ್​ ಪಂದ್ಯಕ್ಕೆ ತಂಡದಲ್ಲಿರದ ಕಾರಣ ಅವರು, ಐಸಿಸಿ ನಿಯಮಾವಳಿ ಪ್ರಕಾರ ವಿನ್ನರ್ಸ್​ ಮೆಡಲ್​ ಪಡೆಯಲು ಅರ್ಹರಾಗಿರಲಿಲ್ಲ. ಆದರೆ ಭಾರತ ತಂಡದ ಪ್ರಶಸ್ತಿ ಗೆಲುವಿನಲ್ಲಿ ಪ್ರತಿಕಾ ಪಾತ್ರವೂ ಪ್ರಮುಖವಾದುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

7ಕ್ಕೆ ಮಹಾರಾಷ್ಟ್ರ ಸನ್ಮಾನ

ಮಹಿಳಾ ವಿಶ್ವಕಪ್​ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಮಹಾರಾಷ್ಟ್ರದ 8 ಮಂದಿಯನ್ನು ಮುಖ್ಯಮಂತ್ರಿ ದೇವೇಂದ್ರ ಡ್ನಾವಿಸ್​ ನವೆಂಬರ್​ 7ರಂದು ಮುಂಬೈನಲ್ಲಿ ಸನ್ಮಾನಿಸಲಿದ್ದಾರೆ. ಉಪನಾಯಕಿ ಸ್ಮೃತಿ ಮಂದನಾ, ಜೆಮೀಮಾ ರೋಡ್ರಿಗಸ್​ ಮತ್ತು ಸ್ಪಿನ್ನರ್​ ರಾಧಾ ಯಾದವ್​ ತಂಡದಲ್ಲಿದ್ದ ಮೂವರು ಮಹಾರಾಷ್ಟ್ರ ಆಟಗಾರ್ತಿಯರಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ಈ ಮೂವರಿಗೆ ತಲಾ 2.25 ಕೋಟಿ ರೂ. ನೀಡಿ ಸನ್ಮಾನಿಸಲಿದೆ. ತಂಡದ ಕೋಚ್​ ಅಮೋಲ್​ ಮುಜುಮ್ದಾರ್​ ಕೂಡ ಮಹಾರಾಷ್ಟ್ರದವರಾಗಿದ್ದು, 22.5 ಲಕ್ಷ ರೂ. ಬಹುಮಾನ ಪಡೆಯಲಿದ್ದಾರೆ. ಬೌಲಿಂಗ್​ ಕೋಚ್​ ಆವಿಷ್ಕಾರ್​ ಸಾಳ್ವಿ, ಮಸಾಜು ತಜ್ಞರಾದ ಮಮತಾ ಶಿರ್​ಸುಲ್ಲಾ, ಪೂರ್ವ ಕಾಟೆ ಮತ್ತು ತಂಡದ ಪರ್ಫಾರ್ಮೆನ್ಸ್​ ಅನಾಲಿಸ್ಟ್​ ಅನಿರುದ್ಧ ದೇಶಪಾಂಡೆ ಕೂಡ ಮಹಾರಾಷ್ಟ್ರದವರಾಗಿದ್ದಾರೆ.

ರಿಚಾಗೆ ಚಿನ್ನದ ಬ್ಯಾಟ್​-ಬಾಲ್​

ವಿಶ್ವಕಪ್​ ವಿಜೇತ ತಂಡದ ವಿಕೆಟ್​ ಕೀಪರ್​-ಬ್ಯಾಟರ್​ ರಿಚಾ ಘೋಷ್​ ಅವರನ್ನು ತವರಿನ ಬಂಗಾಳ ಕ್ರಿಕೆಟ್​ ಸಂಸ್ಥೆ (ಸಿಎಬಿ) ಶನಿವಾರ ಕೋಲ್ಕತದ ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ನಡೆಯಲಿರುವ ಸನ್ಮಾನ ಸಮಾರಂಭದಲ್ಲಿ ವಿಶೇಷವಾಗಿ ತಯಾರಿಸಿದ ಚಿನ್ನ ಲೇಪಿತ ಬ್ಯಾಟ್​ ಮತ್ತು ಚೆಂಡು ನೀಡಿ ಗೌರವಿಸಲಿದೆ. ಭಾರತ ತಂಡದ ಮಾಜಿ ನಾಯಕ ಹಾಗೂ ಸಿಎಬಿ ಅಧ್ಯಕ್ಷ ಸೌರವ್​ ಗಂಗೂಲಿ ಮತ್ತು ಮಹಿಳಾ ತಂಡದ ಮಾಜಿ ವೇಗಿ ಜೂಲನ್​ ಗೋಸ್ವಾಮಿ ಅವರ ಸಹಿ ಇರುವ ಬ್ಯಾಟ್​-ಚೆಂಡನ್ನೂ ರಿಚಾಗೆ ಉಡುಗೊರೆ ನೀಡಲಾಗುವುದು. ರಿಚಾ ವಿಶ್ವಕಪ್​ನಲ್ಲಿ ಸರ್ವಾಧಿಕ 12 ಸಿಕ್ಸರ್​ ಸಿಡಿಸಿ ದಾಖಲೆ ಬರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net