ವ್ಯಾಪಾರ ಸಂಘರ್ಷ ನಡುವೆಯೇ ಮುಂದಿನ ತಿಂಗಳು ಅಮೆರಿಕದಲ್ಲಿ ಪ್ರಧಾನಿ ಮೋದಿ-ಟ್ರಂಪ್ ಭೇಟಿ​ ಸಾದ್ಯತೆ! PM Modi

PM Modi
Published on

PM Modi : ಮುಂದಿನ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ, ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜೊತೆ ಸಭೆ ನಡೆಸಿ, ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನವು ಸಹ ನಡೆಯಲಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಟ್ರಂಪ್ ಮಾತ್ರವಲ್ಲದೆ, ಯೂಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಸೇರಿದಂತೆ ವಿದೇಶಿ ನಾಯಕರೊಂದಿಗೆ ಪ್ರಧಾನಿ ಮೋದಿ ಅವರು ಉನ್ನತ ಮಟ್ಟದ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಂದಹಾಗೆ, ಯುಎನ್‌ಜಿಎ ಶೃಂಗಸಭೆ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆಯಲಿದೆ.

ಒಂದು ವೇಳೆ ಟ್ರಂಪ್​ ಭೇಟಿ ಸಾಕಾರಗೊಂಡರೆ, ಕಳೆದ ಏಳು ತಿಂಗಳಲ್ಲಿ ಇದು ಎರಡನೇ ಭೇಟಿಯಾಗಲಿದೆ. ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಶ್ವೇತಭವನಕ್ಕೆ ಭೇಟಿ ನೀಡಿದ್ದರು.

ಅಂದಹಾಗೆ, ಟ್ರಂಪ್ ಅವರು ತಮ್ಮ ಮೊದಲ ಅವಧಿಯಲ್ಲಿ ಪ್ರಧಾನಿ ಮೋದಿ ಜೊತೆ ವೈಯಕ್ತಿಕ ಬಾಂಧವ್ಯವನ್ನು ಬೆಳೆಸಿಕೊಂಡರು. ಅದಕ್ಕೆ ಸಾಕ್ಷಿಯಾಗಿ ಮೊದಲ ಅವಧಿಯಲ್ಲಿ ಹೌಡಿ ಮೋದಿ ಹೆಸರಿನಲ್ಲಿ ವಿಶೇಷ ಸಮಾರಂಭ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ಅವರು ನಮಸ್ತೆ ಟ್ರಂಪ್​ ಕಾರ್ಯಕ್ರಮ ಮಾಡಿದ್ದರು. ಅನೇಕ ಬಾರಿ ಮೋದಿಯವರನ್ನು ತಮ್ಮ "ಸ್ನೇಹಿತ" ಎಂದು ಟ್ರಂಪ್​ ಕರೆದಿದ್ದಾರೆ. ಆದರೆ, ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಭಾರತದ ಮೇಲಿನ ಬಲವಂತದ ಸುಂಕ ಕ್ರಮಗಳು ಹಾಗೂ ಟ್ರಂಪ್​ ಅವರ ಹೇಳಿಕೆಗಳು ಉಭಯ ದೇಶಗಳ ಸೌಹಾರ್ದತೆಯನ್ನು ಅಲುಗಾಡಿಸಿವೆ.

ಉಭಯ ದೇಶಗಳ ಬಿಕ್ಕಟ್ಟಿನ ಮಧ್ಯೆ ಮುಂಬರುವ ವಾರಗಳಲ್ಲಿ ಮೋದಿ-ಟ್ರಂಪ್ ಭೇಟಿಯ ನಿರೀಕ್ಷೆಯು ಹಲವಾರು ಅಂಶಗಳನ್ನು ಅವಲಂಬಿಸಿದೆ. ಭಾರತದ ಮೇಲೆ ಅಮೆರಿಕ ಶೇ. 50 ರಷ್ಟು ಸುಂಕ ಹೇರಿದ್ದು, ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ಟ್ರಂಪ್​ ಜೊತೆ ಮೋದಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ, ರಷ್ಯಾ ಬಳಿ ಭಾರತ ತೈಲ ಖರೀದಿ ಮಾಡುತ್ತಿದ್ದು, ಅದರಿಂದ ಬರುತ್ತಿರುವ ಆದಾಯದಿಂದಲೇ ರಷ್ಯಾ-ಯೂಕ್ರೇನ್​ ಯುದ್ಧ ಇನ್ನೂ ಜೀವಂತವಾಗಿದೆ ಎಂದು ಅಮೆರಿಕ ಆರೋಪಿಸಿದೆ. ಈ ವಿಚಾರವು ಉಭಯ ನಾಯಕರ ನಡುವೆ ಚರ್ಚೆಯಾಗುವ ಸಾಧ್ಯತೆ ಇದೆ.

ಇನ್ನು ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ರಷ್ಯಾ-ಯೂಕ್ರೇನ್​ ಯುದ್ಧ ನಡೆಯುತ್ತಿದೆ. ಈ ದೀರ್ಘಕಾಲದ ಸಂಘರ್ಷ ಕೊನೆಗೊಳಿಸುವ ನಿರ್ಣಯವನ್ನು ಚರ್ಚಿಸಲು ಆಗಸ್ಟ್ 15 ರಂದು ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಸ್ಪರ ಭೇಟಿಯಾಗಲಿದ್ದು, ಈ ಬಗ್ಗೆ ಭಾರತ ಹೆಚ್ಚಿನ ಗಮನ ವಹಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net