ಕೆನಡಾ ಸರೋವರದಲ್ಲಿ ಸೋಪಿನಿಂದ ಸ್ನಾನ ಮಾಡಿದವರ ವಿರುದ್ಧ ಆಕ್ರೋಶ: ಭಾರತೀಯರೆಂಬ ಶಂಕೆ! Bathing

Bathing
Published on

Bathing : ಕೆನಡಾದ ಸರೋವರವೊಂದರಲ್ಲಿ ಸೋಪಿನಿಂದ ಸ್ನಾನ ಮಾಡಿದ್ದಕ್ಕಾಗಿ ನಾಲ್ವರ ಗುಂಪೊಂದು ಭಾರಿ ಟೀಕೆಗೆ ಗುರಿಯಾಗಿದೆ. ಈ ಘಟನೆ ಕೆನಡಾದ ಬ್ರಾಂಪ್ಟನ್ ಸರೋವರದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಿರ್ಕ್​ ಲುಬಿಮೊವ್​ (Kirk Lubimov) ಹೆಸರಿನ ಎಕ್ಸ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಕೆನಡಾದ ಕಡಲತೀರಗಳು ವಿದೇಶಿಯರಿಗೆ ಸ್ನಾನಗೃಹಗಳಾಗಿ ಬದಲಾಗುತ್ತಿವೆ. ಕೆನಾಡದ ಖ್ಯಾತಿಗೆ ಧಕ್ಕೆ ತರುತ್ತಿದ್ದಾರೆ ಎಂದು ಬರೆದುಕೊಳ್ಳಲಾಗಿದ್ದು, ಈಗಾಗಲೇ ಐದು ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ಅನೇಕ ಮಂದಿ ವಿಡಿಯೋ ಕೆಳಗೆ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ನದಿ, ಸರೋವರಗಳನ್ನು ಹಾಳು ಮಾಡುತ್ತಿದ್ದಾರೆ. ಇಂತಹ ಕೆಲಸಗಳನ್ನು ಮಾಡುವವರಿಗೆ ಅರಿವು ಮೂಡಿಸಬೇಕು ಮತ್ತು ಸಾರ್ವಜನಿಕ ಜಲಮೂಲಗಳಲ್ಲಿ ಇದನ್ನು ಅನುಮತಿಸಬಾರದು ಎಂದು ಹೇಳುತ್ತಿದ್ದಾರೆ.

ಬೀಚ್‌ನಲ್ಲಿ ಸೋಪ್ ಮತ್ತು ಶಾಂಪೂ ಬಳಸಿ ಸ್ನಾನ ಮಾಡುವುದು ಪರಿಸರಕ್ಕೆ ಹಾನಿಕಾರಕ ಮತ್ತು ಜಲಮೂಲದ ಸೂಕ್ಷ್ಮ ಪರಿಸರ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಅನುಕೂಲಕರವೆಂದು ತೋರುತ್ತದೆಯಾದರೂ, ಸಾಗರಗಳು, ಸರೋವರಗಳು ಅಥವಾ ನದಿಗಳಂತಹ ನೈಸರ್ಗಿಕ ನೀರಿನ ಮೂಲಗಳಲ್ಲಿ ಸೋಪ್ ಬಳಸುವುದರಿಂದ ನೀರಿನ ರಸಾಯನಶಾಸ್ತ್ರವನ್ನು ಅಡ್ಡಿಪಡಿಸಬಹುದು, ಜಲಚರಗಳಿಗೆ ಹಾನಿಯಾಗಬಹುದು ಮತ್ತು ಕಡಲತೀರಕ್ಕೆ ಹೋಗುವ ಇತರರ ಆರೋಗ್ಯದ ಮೇಲೆ ಸಂಭಾವ್ಯವಾಗಿ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ವೈರಲ್​ ವಿಡಿಯೋದಲ್ಲಿರುವ ವ್ಯಕ್ತಿಗಳು ಭಾರತೀಯರು ಎಂದು ಹಲವರು ಅನುಮಾನಿಸಿದ್ದಾರೆ. ಆದಾಗ್ಯೂ, ಅವರು ಭಾರತೀಯರು ಎಂದು ದೃಢೀಕರಿಸುವ ಯಾವುದೇ ಮಾಹಿತಿ ಇಲ್ಲ. ಸದ್ಯ ವಿಡಿಯೋ ಮಾತ್ರ ಭಾರಿ ಚರ್ಚೆಯಲ್ಲಿದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net