

ನವದೆಹಲಿ: ಕರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಸಂಕಷ್ಟದಲ್ಲಿರುವ ದೇಶಗಳಿಗೆ ಭಾರತ ರಫ್ತು ಮಾಡಲು ತಯಾರು ಇರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.
ಈ ಔಷಧವನ್ನು ರಫ್ತು ಮಾಡದೇ ಹೋದರೆ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ನಿನ್ನೆಯಷ್ಟೇ ಬೆದರಿಕೆ ಒಡ್ಡಿದ್ದ ಟ್ರಂಪ್, ಇದೀಗ ತಮ್ಮ ವರಸೆ ಬದಲಿಸುವ ಮೂಲಕ, ‘ಮೋದಿ ಈಸ್ ಗ್ರೇಟ್ ಎಂದು ಕೊಂಡಾಡಿದ್ದಾರೆ.
ಕಳೆದ ವಾರ ಹೈಡ್ರೋಕ್ಲೋರಿಕ್ವೀನ್ ಔಷಧಿ ರಫ್ತಿಗೆ ನಿರ್ಬಂಧ ಹೇರಿದ್ದ ವಿದೇಶಾಂಗ ಸಚಿವಾಲಯ ನಿನ್ನೆ ಸಂಜೆ ರಫ್ತಿನ ಮೇಲಿನ ನಿರ್ಬಂಧವನ್ನು ಸಡಿಲಿಕೆ ಮಾಡಿದೆ. ಈಗಾಗಲೇ ಗುಜರಾತ್ ಕಾರ್ಖಾನೆಗಳಿಂದ 29 ದಶಲಕ್ಷ ಟನ್‌ನಷ್ಟು ಮಲೇರಿಯಾ ಔಷಧಿಗಳು ಅಮೆರಿಕಕ್ಕೆ ರಫ್ತು ಮಾಡಲಾಗಿದ್ದು, ಶೀಘ್ರದಲ್ಲೇ ಈ ಮಾತ್ರೆಗಳು ಅಮೆರಿಕ ತಲುಪಲಿವೆ. ಇದರ ಬೆನ್ನಲ್ಲೇ ಟ್ರಂಪ್ ಅವರಿಂದ ಶ್ಲಾಘನೆ ವ್ಯಕ್ತವಾಗಿದೆ. ‘ಮೋದಿ ಒಬ್ಬ ಉತ್ತಮ ಮತ್ತು ಆತ್ಮೀಯ ಗೆಳೆಯ’ ಎಂದಿದ್ದಾರೆ.
“ನಾನು ಲಕ್ಷಾಂತರ ಡೋಸ್ ಅಂದರೆ 29 ದಶಲಕ್ಷಕ್ಕಿಂತಲೂ ಅಧಿಕ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ಖರೀದಿಸಿದ್ದೇನೆ. ನಾನು ಪ್ರಧಾನಿ ಮೋದಿ ಅವರ ಜತೆ ಮಾತುಕತೆ ನಡೆಸಿದ್ದೆ. ಇದೀಗ ಭಾರತ ಬೇಕಾದಷ್ಟು ಡೋಸ್ ಕಳುಹಿಸಿದೆ. ನಿಜಕ್ಕೂ ಮೋದಿ ಶ್ರೇಷ್ಠ ವ್ಯಕ್ತಿ. ನಿಜಕ್ಕೂ ಒಳ್ಳೆಯ ನಿರ್ಧಾರ ಎಂದು ಶ್ಲಾಘಿಸಿದ್ದಾರೆ. ಕರೊನಾಪೀಡಿತ ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯೂ ಸೇರಿದಂತೆ ಒಟ್ಟು 24 ವಿವಿಧ ಮಾತ್ರೆಗಳನ್ನು ರಫ್ತು ಮಾಡಲಲು ಭಾರತ ನಿರ್ಧರಿಸಿದೆ.
ಈಗಾಗಲೇ ಅಮೆರಿಕದಲ್ಲಿ ಕರೊನಾ ವೈರಸ್‌ಗೆ ಈಗಾಗಲೇ ಸುಮಾರು 13 ಸಾವಿರ ಮಂದಿ ಬಲಿಯಾಗಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದಾರೆ. (ಏಜೆನ್ಸೀಸ್)