ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆಯತ್ತ ಸಾಗುತ್ತಿದೆ; ಪ್ರಧಾನಿ ಮೋದಿ

Narendra Modi
Published on

ತುಮಕೂರು: ಪ್ರಧಾನಿ ನರೇಂದ್ರ ಮೋದಿ ತುಮಕೂರು ಟೌನ್​ಷಿಪ್, ಚೆನ್ನೈ-ಬೆಂಗಲೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿನ ಕೈಗಾರಿಕಾ ಕೇಂದ್ರ ಹಾಗೂ ಜಲ ಜೀವನ್ ಮಿಷನ್ ಅಡಿ ಬಹುಗ್ರಾಮ ನೀರು ಸರಬರಾಜು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಕನ್ನಡದಲ್ಲೇ ಭಾಷಣ ಪ್ರಾರಂಭಿಸಿದ ಪ್ರಧಾನಿ ಮೋದಿ, ಸಿದ್ಧಗಂಗಾ ಮಠ ಹಾಗೂ ಶಿವಕುಮಾರ ಸ್ವಾಮೀಜಿ, ಗುಬ್ಬಿಯ ಚೆನ್ನಬಸವೇಶ್ವರ ಅವರನ್ನು ಸ್ಮರಿಸಿದರು.

ಪ್ರಧಾನಿ ಮೋದಿ ಮಾತನಾಡುತ್ತಾ, ಇಂದು ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ನಿರ್ಮಾಣ ಘಟಕ ತುಮಕೂರಿನಲ್ಲಿ ಉದ್ಘಾಟನೆಯಾಗಿದೆ. ಇದರಿಂದ ಭಾರತೀಯರ ರಕ್ಷಣೆಗೆ ವಿದೇಶಿಯರ ಅವಲಂಬನೆ ಕಡಿಮೆಯಾಗಿದ್ದು, ಆತ್ಮನಿರ್ಭರದ ಮೂಲಕ ಹೆಲಿಕಾಪ್ಟರ್ ತಯಾರಾಗಲಿದೆ. ಕರ್ನಾಟಕದ ಉತ್ಪಾದನಾ ಸಾಮರ್ಥ್ಯವನ್ನು ಜಗತ್ತು ನೋಡುತ್ತಿದೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ದಿಗೆ ಶ್ರಮಿಸುತ್ತಿದೆ. ಹೆಲಿಕಾಪ್ಟರ್ ಉತ್ಪಾದನಾ ಘಟಕದ ನಿರ್ಮಾಣದಿಂದ ಯುವಕರಿಗೆ ಉದ್ಯೋಗ ಹಾಗೂ ಸ್ಥಳೀಯವಾಗಿ ವ್ಯಾಪಾರ ವಹಿವಾಟು ನಡೆಯಲಿದೆ ಎಂದರು.

ಕರ್ನಾಟಕ ಪ್ರತಿಭಾವಂತ ಯುವಕರ ನಾಡು. ರಾಜ್ಯದಲ್ಲಿ ಡ್ರೋನ್‌ನಿಂದ ಹಿಡಿದು ತೇಜಸ್ ವಿಮಾನಗಳ ತಯಾರಿಕೆ ನಡೆಯುತ್ತಿದೆ. ಹೂಡಿಕೆದಾರರಿಗೆ ಕರ್ನಾಟಕದ ಮೊದಲ ಆಯ್ಕೆಯಾಗಿದೆ. ಆಧುನಿಕ ಅಸಾಲ್ಟ್ ರೈಫಲ್‌ಗಳು, ವಿಮಾನವಾಹಕ ನೌಕೆ, ಫೈಟರ್ ಜೆಟ್‌ಗಳವರೆಗೆ ಭಾರತವೇ ತಯಾರಿಸುತ್ತಿದೆ.

ಎಚ್​​ಎಎಲ್ ಮತ್ತು ಹಲವರ ಬಗ್ಗೆ ತಪ್ಪು ಮಾಹಿತಿ ಹರಡಿಸಿ, ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಇದರಿಂದಾಗಿ ಸಂಸತ್ತಿನ ಕೆಲಸದ ಸಮಯಗಳು ವ್ಯರ್ಥವಾಗಿದೆ. ಎಚ್‌ಎಎಲ್‌ನ ಹೆಲಿಕಾಪ್ಟರ್ ಫ್ಯಾಕ್ಟರಿ ಮತ್ತು ಅದರ ಹೆಚ್ಚುತ್ತಿರುವ ಶಕ್ತಿ, ಸುಳ್ಳು ಆರೋಪ ಹೊರಿಸಿದವರನ್ನು ಅನಾವರಣಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net