ವಿಷ ಅನಿಲ ಸೋರಿಕೆ ದುರಂತ; ಗೃಹಸಚಿವಾಲಯ, ಎನ್​ಡಿಎಂಎ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಪ್ರಧಾನಿ

Modi 7 may 20
Published on

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಮಲ್ಟಿನ್ಯಾಶನಲ್​ ರಾಸಾಯನಿಕ ಕಂಪನಿಯೊಂದರಲ್ಲಿ ವಿಷ ಅನಿಲ ಸೋರಿಕೆಯಾಗಿ ಸುಮಾರು ಎಂಟು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. 200ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11 ಗಂಟೆಗೆ ಆಂಧ್ರಪ್ರದೇಶ ಗೃಹಸಚಿವಾಲಯದ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ) ಸಿಬ್ಬಂದಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು. ಈ ವೇಳೆ ಘಟನೆಯ ಸಂಪೂರ್ಣ ವರದಿ ಕೇಳಿದ್ದಾರೆ. ಹಾಗೇ ಸ್ಥಳದಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯ ಬಗ್ಗೆಯೂ ವಿಚಾರಿಸಿದ್ದಾರೆ.

ನಂತರ ಟ್ವೀಟ್ ಮಾಡಿರುವ ಮೋದಿಯವರು, ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆಯಿಂದ ಕಷ್ಟಪಡುತ್ತಿರುವ ಎಲ್ಲರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ವಿಶಾಖಪಟ್ಟಣಂನ ಆರ್​ಆರ್ ವೆಂಕಟಪುರಂ ಎಂಬ ಹಳ್ಳಿಯಲ್ಲಿ ಇರುವ ಎಲ್​.ಜಿ ಪಾಲಿಮರ್ಸ್​ ಇಂಡಿಯಾ ಪ್ರವೈಟ್​ ಲಿಮಿಟೆಡ್​ ಕೆಮಿಕಲ್​ ಫ್ಯಾಕ್ಟರಿಯಲ್ಲಿ ನಡೆದ ಈ ದುರಂತದಲ್ಲಿ ಪುಟ್ಟ ಮಗು ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಸುಮಾರು 2000 ಮೆಟ್ರಿಕ್​ ಟನ್​ಗಳಷ್ಟು ವಿಷ ಅನಿಲ ಸೋರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಎನ್​ಡಿಎಂಎ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಕೆಲವೇ ಹೊತ್ತಲ್ಲಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net