Rahul Gandhi | ಮೋದಿ ಅಂಬಾನಿ, ಅದಾನಿಯ ರಿಮೋಟ್​ ಕಂಟ್ರೋಲ್​; ಟ್ರಂಪ್​ ಬಗ್ಗೆ ಪ್ರಧಾನಿಗೆ ಭಯವಿದೆ ಎಂದ ರಾಹುಲ್​ ಗಾಂಧಿ

Rahul Gandhi IN Uttar Pradesh
Published on

Patna: ಬಿಹಾರ ವಿಧಾನಸಭಾ ಚುನಾವಣೆ ಐದು ನಾಲ್ಕು ದಿನ ಬಾಕಿ ಉಳಿದಿದ್ದು, ದಿನ ಕಳೆದಂತೆ ಪ್ರಚಾರ ವೇಗ ಪಡೆದುಕೊಳ್ಳುತ್ತಿದೆ, ಇಂದು ರಾಜ್ಯದಲ್ಲಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ (Rahul Gandhi), ಪ್ರಧಾನಿ ನರೇಂದ್ರ ಮೋದಿ ಮತಗಳಿಗಾಗಿ ನಾಟಕ ಮಾಡುತ್ತಿದ್ದಾರೆ, ಈ ಹಿಂದೆ ಅವರು ಮಾತು ಕೊಟ್ಟಂತೆ ತಮ್ಮ ಯಾವ ಭರವಸೆಗಳನ್ನು ಈಡೇರಿಸಿಲ್ಲ ಎಂದು ಟೀಕಿಸಿದ್ದಾರೆ.

ಬಿಹಾರದ ಬೇಗುಸರಾಯ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್, ನೀವು ಅವರನ್ನು ಯೋಗ ಮಾಡಲು ಹೇಳಿ, ಕೆಲವು ಆಸನಗಳನ್ನು ಮಾಡುತ್ತಾರೆ. ಆದರೆ ಚುನಾವಣೆಯ ನಂತರ, ಎಲ್ಲಾ ಹಾಡುಗಾರಿಕೆ ಮತ್ತು ನೃತ್ಯವನ್ನು ಅದಾನಿ ಮತ್ತು ಅಂಬಾನಿಗಾಗಿ ಮೀಸಲಿಡುತ್ತಾರೆ, ಇದೆಲ್ಲವೂ ಕೇವಲ ನಾಟಕ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಬರುತ್ತಾರೆ, ಚುನಾವಣಾ ಭಾಷಣ ಮಾಡುತ್ತಾರೆ, ಭರವಸೆಗಳನ್ನು ನೀಡುತ್ತಾರೆ, ಮತದಾನದ ದಿನದವರೆಗೆ ನೀವು ಏನು ಕೇಳಿದರೂ ಮಾಡುತ್ತೇನೆ ಎಂದು ಹೇಳುತ್ತಾರೆ. ಫಲಿತಾಂಶದ ಬಳಿಕ ಬಿಹಾರಕ್ಕೆ ಬರುವುದನ್ನು ನಿಲ್ಲಿಸುತ್ತಾರೆ ಮತ್ತು ನಿಮ್ಮ ಯಾವ ಮಾತನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ, ರಾಜ್ಯದ ಜನತೆಗೆ ಏನೇ ಮಾಡುವುದಿದ್ದರು ಈಗಲೇ ಮಾಡಿ ಎಂದರು.

ಭಾರತ-ಪಾಕಿಸ್ತಾನ ಸಂಘರ್ಷವನ್ನು ನಿಲ್ಲಿಸುವ ಟ್ರಂಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, 56 ಇಂಚಿನ ಎದೆ ಇದೆ ಎಂದು ಹೇಳುವ ಪ್ರಧಾನಿ ಮೋದಿ ಟ್ರಂಪ್‌ಗೆ ಹೆದರುತ್ತಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಪ್ರಧಾನಿ ಮೋದಿಗೆ ಹೇಳಿದರು, ಅದನ್ನು ನಮ್ಮ ಪ್ರಧಾನಿ ಎರಡೇ ದಿನಗಳಲ್ಲಿ ಕಾರ್ಯರೂಪಕ್ಕೆ ತಂದರು, ಟ್ರಂಪ್‌ಗೆ ಹೆದರುವುದು ಮಾತ್ರವಲ್ಲದೆ, ಅದಾನಿ ಮತ್ತು ಅಂಬಾನಿಯಿಂದ ರಿಮೋಟ್ ಕಂಟ್ರೋಲ್ ಆಗಿದ್ದಾರೆ ಎಂದು ಹೇಳಿದರು.

ಜಿಎಸ್‌ಟಿ ಮತ್ತು ನೋಟು ರದ್ದತಿಯಂತಹ ಮೋದಿ ಸರ್ಕಾರದ ಎಲ್ಲಾ ಪ್ರಮುಖ ನಿರ್ಧಾರಗಳು ಸಣ್ಣ ವ್ಯವಹಾರಗಳನ್ನು ನಾಶಮಾಡುವ ಮತ್ತು ದೊಡ್ಡ ವ್ಯವಹಾರಗಳಿಗೆ ಲಾಭ ತರುವ ಗುರಿಯನ್ನು ಹೊಂದಿವೆ ಎಂದ ವಿಪಕ್ಷ ನಾಯಕ, ರಾಜ್ಯದ ಅಭಿವೃದ್ದಿಯ ವಿಷಯದಲ್ಲಿ ನಮ್ಮ ವಿಧಾನವು ವಿಭಿನ್ನವಾಗಿದೆ. ನಾವು ಸಣ್ಣ ವ್ಯವಹಾರಗಳನ್ನು ಉತ್ತೇಜಿಸಲು ಬಯಕೆ ಇದ್ದು, ನಿಮ್ಮ ಫೋನ್‌ಗಳು ಮತ್ತು ಟಿ-ಶರ್ಟ್‌ಗಳಲ್ಲಿ ಚೀನಾದ ಲೇಬಲ್‌ಗಳನ್ನು ಬದಲಿಸಿ, ಬಿಹಾರದಲ್ಲಿ ಲೇಬಲ್​ಗಳಾಗಿ ಬದಲಾಯಿಸಲು ಆಲೋಚಿಸುತ್ತಿದ್ದೇವೆ ಎಂದರು.

ರೀಲ್ಸ್​ ವೀಕ್ಷಿಸಲು ಹೇಳುವ ಪ್ರಧಾನಿ

ನಿರುದ್ಯೋಗದಂತಹ ನೈಜ ಸಮಸ್ಯೆಗಳ ಬಗ್ಗೆ ಯುವಜನರ ಗಮನ ಬೇರೆಡೆಗೆ ಸೆಳೆಯಲು, ಅದರ ಕುರಿತಾಗಿ ಯಾವುದೇ ಪ್ರಶ್ನೆ ಎತ್ತದಂತೆ ನೋಡಿಕೊಳ್ಳಲು ಪ್ರಧಾನಿ ಮೋದಿ ರೀಲ್‌ಗಳನ್ನು ವೀಕ್ಷಿಸಲು ಹೇಳುತ್ತಿದ್ದಾರೆ ಎಂದಿರುವ ಕಾಂಗ್ರೆಸ್​ ನಾಯಕ, ನಮ್ಮ ಮಹಾಘಟಬಂಧನ್ ಬಿಹಾರದಲ್ಲಿ ಅಧಿಕಾರಕ್ಕೆ ಬರಲಿದೆ ಮತ್ತು ನಾವು ನಿಮಗೆ ಉತ್ತಮ ಶಿಕ್ಷಣವನ್ನು ಒದಗಿಸುತ್ತೇವೆ. ಕೇಂದ್ರದಲ್ಲಿ ಇಂಡಿಯಾ ಬಣ ಅಧಿಕಾರಕ್ಕೆ ಬಂದ ದಿನ, ನಾವು ನಳಂದ ವಿಶ್ವವಿದ್ಯಾಲಯದಂತೆಯೇ ಉತ್ತಮ ವಿಶ್ವವಿದ್ಯಾಲಯವನ್ನು ತೆರೆಯುತ್ತೇವೆ, ವಿದೇಶದಿಂದ ಕೂಡ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಪ್ರವೇಶ ಪಡೆಯುವಂತಹ ವಾತಾವರಣವನ್ನು ನಾವು ನಿರ್ಮಿಸುತ್ತೇವೆ ಎಂದು ಹೇಳಿದರು.

ಕಳೆದ ವಾರ ಇದೇ ರೀತಿಯ ಮಾತುಗಳನ್ನಾಡಿದ್ದ ರಾಹುಲ್​, ನೀವು ನರೇಂದ್ರ ಮೋದಿಯವರಿಗೆ ನಿಮ್ಮ ಮತಗಳಿಗೆ ಪ್ರತಿಯಾಗಿ ನೃತ್ಯ ಮಾಡಲು ಹೇಳಿದರೆ, ಅವರು ವೇದಿಕೆಯ ಮೇಲೆ ನೃತ್ಯ ಮಾಡುತ್ತಾರೆ ಎಂದಿದ್ದರು. ಈ ಹೇಳಿಕೆಗಳನ್ನು ಖಂಡಿಸಿದ್ದ ಬಿಜೆಪಿ, ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ, ಲೋಕಸಭೆಯ ವಿಪಕ್ಷ ನಾಯಕರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಮತ್ತು ಪ್ರಧಾನಿ ಕಚೇರಿಯ ಘನತೆಯನ್ನು ಕುಗ್ಗಿಸಿದ್ದಾರೆ ಆದ್ದರಿಂದ ತಕ್ಷಣವೇ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net