

ಕುಂದಾಪುರ: ಎರಡು ತಿಂಗಳಿನಿಂದ ಸಂಬಳ ಬಾರದಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆಗೆ ತೊಂದರೆ ಎದುರಿಸುತ್ತಿದ್ದಾರೆ.
ಸಂಬಳ ಇಲ್ಲದೆ 3ನೇ ತಿಂಗಳಾದರೂ ಈವರೆಗೆ ಸರ್ಕಾರದ ಯಾವುದೇ ಸ್ಪಂದನೆ ಸಿಗದೇ ಇರುವುದಕ್ಕೆ ಆತಂಕಿತರಾಗಿದ್ದಾರೆ. ರಾಜ್ಯದಲ್ಲಿ 61,876 ಮಂದಿ ಅಂಗನವಾಡಿ ಕಾರ್ಯಕರ್ತೆಯರಿದ್ದು, ಜುಲೈ, ಆಗಸ್ಟ್ ತಿಂಗಳ ಸಂಬಳ ಆಗಿಲ್ಲ. ಜೂನ್ ತಿಂಗಳಿನಲ್ಲಿ ಕೆಲವು ಮಂದಿ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಆಗಿದ್ದರೆ, ಇನ್ನೂ ಹಲವರಿಗೆ ಜೂನ್ ತಿಂಗಳ ಸಂಬಳ ಇನ್ನೂ ದೊರೆತಿಲ್ಲ. ಪ್ರತಿ ತಿಂಗಳ 25ನೇ ತಾರೀಕಿಗೆ ಅಲಾಟ್‌ಮೆಂಟ್ ಆಗುತ್ತಿದ್ದು, ಆದರೆ ಅಂಗನವಾಡಿ ಕಾರ್ಯಕರ್ತರ ಸಂಬಳ ಬಿಡುಗಡೆಗೆ ಈವರೆಗೆ ಯಾವುದೇ ಅಲಾಟ್‌ಮೆಂಟ್ ಕೂಡ ಆಗಿಲ್ಲ. ಹೀಗಾಗಿ ಸೆಪ್ಟೆಂಬರ್ ತಿಂಗಳ ಸಂಬಳ ಕೈ ಸೇರುವುದೂ ಕಷ್ಟ ಎಂಬ ಅಭಿಪ್ರಾಯ ಮೂಡಿದೆ. ಗೌರವಧನದೊಂದಿಗೆ ಪುಟಾಣಿಗಳ ಶೈಕ್ಷಣಿಕ ಸೇವೆ ನೀಡುತ್ತಿರುವ ನೌಕರರು ಇತರೆ ಇಲಾಖೆಗಳ ಸೇವೆಗಳಲ್ಲಿಯೂ ಸಹಕರಿಸುತ್ತಿದ್ದಾರೆ. ಎರಡು ತಿಂಗಳಿನಿಂದ ಸಂಬಳ ಇಲ್ಲದ ಕಾರಣಕ್ಕೆ ದೈನಂದಿನ ಜೀವನ ನಿರ್ವಹಣೆಗೆ ಭಾರಿ ತೊಡಕು ಎದುರಾಗಿದೆ.
ಎರಡು ತಿಂಗಳಿನಿಂದ ಸಂಬಳ ಸಿಗದ ಹಿನ್ನೆಲೆ ಬ್ಯಾಂಕ್, ಸ್ವಸಹಾಯ ಸಂಘಗಳ ಮೂಲಕ ಸಾಲ ಪಡೆದವರು ಸಾಲ ಮರುಪಾವತಿ ಮಾಡಲಾಗುತ್ತಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಯಕರ್ತೆಯರ ವೈದ್ಯಕೀಯ ಚಿಕಿತ್ಸೆಗೆ ತೊಂದರೆ ಆಗುತ್ತಿದೆ. ಗೌರವಧನವನ್ನೇ ನೆಚ್ಚಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದ ಸಂಬಳದ ವಿಷಯದಲ್ಲಿ ಪದೇಪದೆ ತೊಂದರೆ ನೀಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಬಜೆಟ್ ಅಲೋಕೇಶನ್ ಇಲ್ಲದ ಕಾರಣ 2 ತಿಂಗಳುಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಬಿಡುಗಡೆ ಆಗಿಲ್ಲ. ರಾಜ್ಯಾದ್ಯಂತ ಸಮಸ್ಯೆಯಿದೆ. ಅಲಾಟ್‌ಮೆಂಟ್ ರಿಪೋರ್ಟ್ ಸಲ್ಲಿಸಿದ್ದು, ಕೂಡಲೇ ಸಂಬಳ ಬಿಡುಗಡೆಯಾಗುವ ಸಾಧ್ಯತೆ ಇದೆ.-ಉಮೇಶ್, ಸಿಡಿಪಿಒ ಕುಂದಾಪುರ
ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗುವ ಕಡಿಮೆ ಗೌರವಧನ ಕೂಡ ಪ್ರತಿ ಬಾರಿ ವಿಳಂಬವಾಗುತ್ತಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿರುವವರಿಗೆ ತೊಂದರೆಯಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸಿ ನ್ಯಾಯ ದೊರಕಿಸಿಕೊಡಬೇಕು.ಫಿಲೋಮಿನಾ ಫರ್ನಾಂಡಿಸ್ ಅಧ್ಯಕ್ಷೆ-ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ