

-ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಹೆಬ್ರಿಯಿಂದ ಸೀತಾನದಿ ತನಕ ಸುಮಾರು 3 ಕಿಲೋಮೀಟರ್ ಎರಡೂ ಬದಿಯ ಚರಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇದೆ. ಮಳೆಗಾಲದಲ್ಲಿ ಈ ಪ್ಲಾಸಟಿಕ್ ನದಿ ಸೇರುತ್ತದೆ.
ಹೆಬ್ರಿ ಎಸ್ಆರ್ಎಲ್ಎಂ ಘಟಕಕ್ಕೆ ಹೋಗುವ ದಾರಿಯಿಂದ ಹಿಡಿದು ಸೀತಾ ನದಿ ತನಕ ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬರುತ್ತದೆ. ರಾತ್ರಿ ಕಡುಕರು ವಾಹನದಲ್ಲಿ ಬಂದು ಮದ್ಯ ಕುಡಿದು ರಸ್ತೆ ಪಕ್ಕದಲ್ಲಿ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಇನ್ನು ಕೆಲವರು ಮನೆಯಲ್ಲಿ ಸಂಗ್ರಹವಾಗಿದ್ದ ಮದ್ಯದ ಬಾಟಲಿಗಳನ್ನು ಇಲ್ಲಿ ತಂದು ಎಸೆದು ಹೋಗುತ್ತಾರೆ. ಬಿಯರ್ ಬಾಟಲ್ಗಳು ರಸ್ತೆ ಉದ್ದಕ್ಕೂ ಕಾಣಸಿಗುತ್ತವೆ.
ಈ 3 ಕಿ.ಮೀ ವ್ಯಾಪ್ತಿ ಹೆಚ್ಚು ಅರಣ್ಯ ಪ್ರದೇಶವಾಗಿರುವುದರಿಂದ ಪ್ರವಾಸಿಗರು ರಸ್ತೆಯಲ್ಲಿ ಹೋಗುವಾಗ ವಾಹನವನ್ನು ನಿಲ್ಲಿಸಿ ಕಸ ಎಸೆಯುತ್ತಾರೆ. ಸಂಬಂಧಪಟ್ಟವರು ಪ್ರವಾಸಿಗರ ಮೇಲೆ ನಿಗಾ ಇಟ್ಟು ಚೆಕ್ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನೀರಿನ ಬಾಟಲಿಗಳು ಚರಂಡಿಯುದ್ದಕ್ಕೂ ಬಿದ್ದುಕೊಂಡಿವೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಬಾಟಲ್ಗಳು ಕಣ್ಣಿಗೆ ಕುಕ್ಕುತ್ತವೆ.
ಸೋಮೇಶ್ವರದಿಂದ ಹೆಬ್ರಿ ತನಕ ಎಲ್ಲೂ ಸಿಸಿಟಿವಿ ಇಲ್ಲದಿರುವುದರಿಂದ ಜನರು ರಾಜಾರೋಷವಾಗಿ ಮನಬಂದಂತೆ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. ಸಮರ್ಪಕವಾಗಿ ಮಳೆ ಸುರಿಯದ ಕಾರಣ ಪ್ಲಾಸ್ಟಿಕ್ ತ್ಯಾಜ್ಯ ಇನ್ನೂ ಚರಂಡಿಯಲ್ಲಿ ಇದೆ. ಉತ್ತಮ ಮಳೆಯಾದರೆ ಎಲ್ಲ ಪ್ಲಾಸ್ಟಿಕ್ ಸೀತಾನದಿ ಸೇರುತ್ತದೆ. ಆಗುಂಬೆ ಹಾಗೂ ಸೋಮೇಶ್ವರ ಚೆಕ್ಪೋಸ್ಟ್ಗಳಲ್ಲಿ ಪ್ರವಾಸಿಗರು ಬರುವಾಗ ತರುವ ಕಸದ ಮೇಲೆ ನಿಗಾ ಹೇಳಲು ಪ್ರತಿಯೊಂದು ವಾಹನವನ್ನು ಸೂಕ್ತವಾಗಿ ಪರಿಶೀಲನೆ ಮಾಡಬೇಕು. ಒಂದು ವೇಳೆ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬಂದಲ್ಲಿ ಕ್ರಮ ಜರುಗಿಸಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ.
ಹೆದ್ದಾರಿಯ ಎರಡು ಬದಿಯ ಚರಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ತ್ಯಾಜ್ಯವನ್ನು ತೆರವು ಮಾಡಲು ಕ್ರಮ ವಹಿಸುತ್ತೇನೆ.-ಶಶಿಧರ್ ಕೆ.ಜೆ. ಇಒ, ಹೆಬ್ರಿ ತಾಪಂ
ಹೆದ್ದಾರಿಯ ಎರಡೂ ಬದಿಯ ಚರಂಡಿಗಳಲ್ಲಿ ಇರುವ ಕಸ ನೋಡಿದಾಗ ಬೇಸರವಾಗುತ್ತದೆ. ಸಂಬಂಧಪಟ್ಟವರು ಜಾಗೃತಿ ಮೂಡಿಸುವುದರೊಂದಿಗೆ, ಕಸ ಹಾಕುವವರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ. ಸ್ವಚ್ಛ ಹೆಬ್ರಿಯ ಕಲ್ಪನೆಯಲ್ಲಿ ನಾವೆಲ್ಲರೂ ಕೆಲಸ ಮಾಡೋಣ.-ನವೀನ್ ಕೆ.ಅಡ್ಯಾಂತಾಯ, ಸ್ಥಳೀಯರು