

ಕಾರ್ಕಳ: ಕ್ಷುಲ್ಲಕ ವಿಚಾರಕ್ಕಾಗಿ ದಂಪತಿ ಮಧ್ಯೆ ಜಗಳವಾಗಿ ಸಾವಿನೊಂದಿಗೆ ಅಂತ್ಯ ಕಂಡಿರುವ ಘಟನೆ ಭಾನುವಾರ ತಾಲೂಕಿನ ನಲ್ಲೂರಿನಲ್ಲಿ ನಡೆದಿದೆ.
ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ದಿ(40) ಹಾಗೂ ಯಶೋದಾ(32) ಸಾವಿಗೀಡಾದವರು. ಭಾನುವಾರ ಬೆಳಿಗ್ಗೆ ಟಿ.ವಿ ವಿಚಾರಕ್ಕೆ ಸಂಬಂಧಿಸಿ ದಂಪತಿ ಮಧ್ಯೆ ಜಗಳವಾಗಿದ್ದು, ಈ ವೇಳೆ ಯಶೋದಾ ತೋಟದಲ್ಲಿದ್ದ ಕೆರೆಗೆ ಹಾರಿದ್ದಾರೆ. ಯಶೋದಾರನ್ನು ರಕ್ಷಿಸಲು ತೆರಳಿದ ಪತಿ ಇಮ್ಯಾನುಲ್ ಕೂಡ ನೀರುಪಾಲಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್, ಯಶೋದಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ ಅವರ 10 ವರ್ಷದ ಪುತ್ರ ಹಾಗೂ 9 ವರ್ಷದ ಪುತ್ರಿ ಅನಾಥರಾಗಿದ್ದಾರೆ.
ಡಿವೈಎಸ್ಪಿ ಅರವಿಂದ್ ಕಲಗುಜ್ಜಿ, ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ತೇಜಸ್ವಿ, ಸಿಬ್ಬಂದಿ ಪ್ರಕಾಶ್, ಸುಭಾಶ್ ಕಾಮತ್, ಸುಂದರ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.