ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿಸುವ (ಸಿಬಿಟಿ) ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಕೆಇಎ ಅಧ್ಯಕ್ಷರೂ ಆದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ-ಸೆಟ್-23ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.
ಮಹಾರಾಷ್ಟ್ರ ಮತ್ತಿತರ ಒಂದೆರಡು ರಾಜ್ಯಗಳಲ್ಲಿ ಅಲ್ಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಸಿಬಿಟಿ ಮಾದರಿಯಲ್ಲಿ ನಡೆಸಿರುವುದನ್ನು ಅಧ್ಯಯನ ಮಾಡಲಾಗಿದೆ. ಸಿಇಟಿಯನ್ನು ಕಂಪ್ಯೂಟರ್ ಆಧರಿಸಿ ನಡೆಸಲು ಹೆಚ್ಚಿನ ಮೂಲಸೌಕರ್ಯವೂ ಅಗತ್ಯವ್ತಿದೆ. ಸಾಧಕ ಬಾಧಕಗಳನ್ನು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಕಂಪ್ಯೂಟರ್ ಆಧಾರಿತ ಪರೀಕ್ಷಾ ವ್ಯವಸ್ಥೆಯ ಮೂಲಸೌಕರ್ಯಕ್ಕಾಗಿ ಸರ್ಕಾರ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಈ ಸಂಪನ್ಮೂಲದ ಸದುಪಯೋಗ ಪೂರ್ಣ ಪ್ರಮಾಣದಲ್ಲಿ ಆಗುತ್ತದೆಯೇ ಎಂಬ ಬಗ್ಗೆಯೂ ಆಲೋಚಿಸಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಕಂಪ್ಯೂಟರ್ ಆಧಾರಿತವಾಗಿ ಸಿಇಟಿ ನಡೆಸಿದ್ದ ಸಂಸ್ಥೆಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲಾಗಿದೆ ಎಂದು ಹೇಳಿದರು.
ಸಿಇಟಿ ಅರ್ಜಿ ಭರ್ತಿಗೆ ಆೃಪ್:
ಸಿಇಟಿ ಅರ್ಜಿ ತುಂಬುವ ಹಂತದಲ್ಲಿ, ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇನ್ನೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ವಿದ್ಯಾರ್ಥಿಗಳು ಬಹುತೇಕ ಸೈಬರ್ ಸೆಂಟರುಗಳಿಗೆ ಹೋಗಿ ಅರ್ಜಿ ತುಂಬುತ್ತಿದ್ದು, ಗ್ರಾಮೀಣ ವಿದ್ಯಾರ್ಹತೆ, ಮೀಸಲಾತಿ ಮತ್ತಿತರ ಮಾಹಿತಿಗಳನ್ನು ನೀಡುವಾಗ ಹೆಚ್ಚಿನ ಪ್ರಮಾಣದಲ್ಲಿ ತಪ್ಪುಗಳನ್ನು ಎಸಗುತ್ತಿದ್ದಾರೆ ಎಂದರು.
ಈ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಪೂರ್ವ ತಯಾರಿ ನೀಡಲು ಆೃಪ್ ಸಿದ್ಧಪಡಿಸಲಾಗುತ್ತಿದೆ. ಇದು, ಬಹುಮಟ್ಟಿಗೆ ಕೊನೆಯ ಹಂತಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದರ ಜತೆಗೆ ಕಾಲೇಜು ಹಂತದಲ್ಲೇ ಅರ್ಜಿ ಭರ್ತಿ ಮಾಡಿಸುವ ಉದ್ದೇಶವೂ ಇದೆ ಎಂದು ತಿಳಿಸಿದರು.
ಕೆ-ಸೆಟ್‌ನಲ್ಲಿ ಅರ್ಹರಾದವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡಿಕೊಳ್ಳಲು ಸರ್ಕಾರವು ಆದ್ಯತೆ ಮೇರೆಗೆ ಗಮನ ನೀಡಲಿದೆ. ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ನಂತರ ನೇಮಕಾತಿ ಆಗಲಿದೆ. ಜತೆಗೆ, ಮುಂಬರುವ ದಿನಗಳಲ್ಲಿ ಮಂಜೂರಾತಿ ಹುದ್ದೆಗಳು ಹಾಗೂ ಅತಿಥಿ ಬೋಧಕರ ನಡುವಿನ ಅಂತರವನ್ನು ತಗ್ಗಿಸುವುದಕ್ಕೂ ಒತ್ತು ನೀಡಲಿದೆ ಎಂದರು.